ಬೆಂಗಳೂರು: ಕ್ರೀಡೆಯಲ್ಲಿ ಈ ವರ್ಷ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ ಬರೆದಿದ್ದರೆ, ಪುರುಷರ ಮತ್ತು ಮಹಿಳೆಯ ಕ್ರಿಕೆಟ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.
ಏಷ್ಯನ್ ಗೇಮ್ಸ್ ದಾಖಲೆ: ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆಲ್ಲವು ಮೂಲಕ ದಾಖಲೆ ಬರೆಯಿತು. 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಭಾರತದ ಸ್ಪರ್ಧಿಗಳು ಗೆದ್ದುಕೊಂಡಿದ್ದರು. 2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್ ಗೇಮ್ಸ್‍ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು.
Advertisement
Advertisement
ಮೇರಿ ಕೋಮ್ ದಾಖಲೆ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ 6ನೇ ಬಾರಿಗೆ ಚಿನ್ನದ ಜಯಿಸಿ ಅತಿಹೆಚ್ಚು ವಿಶ್ಚ ಚಾಂಪಿಯನ್‍ಶಿಪ್ ಜಯಿಸಿದ ದಾಖಲೆ ಹೊಂದಿರುವ ಕ್ಯೂಬಾ ದಂತಕಥೆ ಫೆಲಿಕ್ಸ್ ಸ್ಯಾವನ್ ದಾಖಲೆಯನ್ನು ಸರಿಗಟ್ಟಿದ್ದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 6 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ.
Advertisement
ಅಂಡರ್ 19 ವಿಶ್ವಕಪ್: ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಅಂಡರ್ 19 ತಂಡ 2018ರ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತು. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಪೃಥ್ವಿಶಾ ನೇತೃತ್ವದ ಭಾರತ ಈ ಮೂಲಕ ನಾಲ್ಕನೇಯ ಬಾರಿ ವಿಶ್ವಕಪ್ ಜಯಿಸಿದ ಸಾಧನೆ ನಿರ್ಮಿಸಿತು.
Advertisement
ಪಿವಿ ಸಿಂಧು: 2018ರ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಪಿವಿ ಸಿಂಧು ಗೆದ್ದಿದ್ದಾರೆ. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ 1 ಬೆಳ್ಳಿ ಮತ್ತು 1 ಚಿನ್ನದ ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. 2018ರ ಪ್ರಶಸ್ತಿಯನ್ನು ಸೇರಿಸಿ ಶ್ರೇಯಾಂಕವನ್ನು ಪರಿಷ್ಕೃತಗೊಳಿಸಿದರೆ ಪಿವಿ ಸಿಂಧುಗೆ ವಿಶ್ವ ನಂ.1 ಪಟ್ಟ ಸಿಗುವ ಸಾಧ್ಯತೆಯಿದೆ.
ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ: ಈ ವರ್ಷ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರು ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. ಪ್ರಮುಖವಾಗಿ ಮೊಹಮ್ಮದ್ ಕೈಫ್, ಮುನಾಫ್ ಪಟೇಲ್, ಆರ್ ಪಿ ಸಿಂಗ್, ಗೌತಮ್ ಗಭೀರ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದರೆ, ಅಂಬಾಟಿ ರಾಯುಡು ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಹೇಳಿದರು.
ಇಂಗ್ಲೆಂಡ್‍ನಲ್ಲಿ ಯುವರಾಜ್ ಸಿಂಗ್‍ರೊಂದಿಗೆ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಕೈಫ್ ಶ್ರೇಷ್ಠ ಫೀಲ್ಡರ್ ಎಂಬ ಖ್ಯಾತಿ ಪಡೆದಿದ್ದರು. ಅಲ್ಲದೇ 2000 ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆರ್ ಪಿ ಸಿಂಗ್ ಟೀಂ ಇಂಡಿಯಾ ಕಂಡ ಯಶಸ್ವಿ ಎಡಗೈ ವೇಗಿ ಆಗಿದ್ದು, 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
2008ರ ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಪ್ರವೀಣ್ ಕುಮಾರ್ ಕೂಡ ನಿವೃತಿ ಘೋಷಿಸಿದರು. 2011ರ ವಿಶ್ವಕಪ್ ಫೈನಲ್ ವಿಜೇತ ತಂಡದ ಸದಸ್ಯರಾಗಿದ್ದ ಬಲಗೈ ವೇಗಿ ಮುನಾಫ್ ಪಟೇಲ್ ಕೂಡ ವಿದಾಯ ಹೇಳಿದರು. 2007ರ ಟಿ20 ಮತ್ತು 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಕೂಡ ಇದೇ ವರ್ಷ ನಿವೃತ್ತಿ ಘೋಷಿಸಿದರು. ನಿವೃತ್ತಿಯ ಅಂತಿಮ ಪಂದ್ಯದವರೆಗೂ ತಮ್ಮ ಬ್ಯಾಟಿಂಗ್ ನಿಂದ ಮಿಂಚಿದ್ದ ಗೌತಿ ವಿದಾಯ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚಿದ್ದರು.
ಮಹಿಳಾ ಟೀಂ ಇಂಡಿಯಾ ಕೋಚ್ ವಿವಾದ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡುವ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿತು. ಇದರೊಂದಿಗೆ ಪಂದ್ಯದಲ್ಲಿ ತಂಡದ ಅನುಭವಿ ಆಟಗಾರ್ತಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಇದು ಟೀಂ ಇಂಡಿಯಾದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಕೋಚ್ ರಮೇಶ್ ಪೊವಾರ್ ಹಾಗೂ ಆಟಗಾರ್ತಿಯರ ನಡುವಿನ ಮನಸ್ತಾಪ ಬಹಿರಂಗವಾಯಿತು.
ಪಾಕ್‍ಗೆ ಮುಖಭಂಗ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಯಿತು. ಈ ಮೂಲಕ ಪಿಸಿಬಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಅನುಭವಿಸಿತು. ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಐಸಿಸಿ ಹಾಲ್ ಆಫ್ ಫೇಮ್: ಟೀಂ ಇಂಡಿಯಾ ಮಾಜಿ ಆಟಗಾರ, ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಐಸಿಸಿಯ ಹಾಲ್ ಆಫ್ ಫೇಮ್ ಗೌರವ ಸಿಕ್ಕಿದೆ. ಈ ಮೂಲಕ ಹಾಲ್ ಆಫ್ ಫೇಮ್ ಗೌರವ ಪಡೆದ ಪಡೆದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ದ್ರಾವಿಡ್ ಪಾತ್ರರಾಗಿದ್ದಾರೆ.
ಕೊಹ್ಲಿಗೆ ಖೇಲ್ ರತ್ನ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಈ ವರ್ಷ ಘೋಷಣೆ ನೀಡಲಾಯಿತು. ಉಳಿದಂತೆ ಬಾಕ್ಸಿಂಗ್ ಕೋಚ್ ಕನ್ನಡಿಗ ಸಿಎ ಕುಟ್ಟಪ್ಪ ಸೇರಿದಂತೆ ಎಂಟು ಮಂದಿ ದ್ರೋಣಾಚಾರ್ಯ ಪ್ರಶಸ್ತಿ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ರಾಹಿ ಸರ್ನೋಬತ್, ಅಥ್ಲೆಟ್ ಹಿಮಾದಾಸ್, ಟೆನ್ನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ, ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ 20 ಮಂದಿ ಅರ್ಜುನ ಪ್ರಶಸ್ತಿಯನ್ನು ಸೆಪ್ಟೆಂಬರ್ 25 ರಂದು ನೀಡಲಾಯಿತು.
ಅಜಿತ್ ವಾಡೇಕರ್ ನಿಧನ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ತಮ್ಮ 77 ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಅವರು ವಿದೇಶಿ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದಿದ್ದ ಭಾರತೀಯ ತಂಡವನ್ನು ಮುನ್ನಡೆಸಿದ್ದ ಕಪ್ತಾನನೆಂಬ ಹೆಗ್ಗಳಿಕೆಯನ್ನು ಪಡೆದಿದ್ದರು.
ಆಸೀಸ್ ಆಟಗಾರರ ಕಳ್ಳಾಟ: ಎದುರಾಳಿ ತಂಡಗಳನ್ನು ಆಸ್ಟ್ರೇಲಿಯಾ ತಂಡ ಹಲವು ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕಿ ವಿವಾದಕ್ಕೆ ಕಾರಣಗುವ ಆಸೀಸ್ ತಂಡದ ಆಟಗಾರರು ಈ ಬಾರಿ ಚೆಂಡು ವಿರೂಪಗೊಳಿಸುವ ಮೂಲಕ ಕ್ರಿಕೆಟ್ ಇತಿಹಾಸಕ್ಕೆ ಮಸಿ ಬಳಿದಿದ್ದರು. ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಕೆಮರೂನ್ ಬ್ಯಾಂಕ್ರೋಫ್ಟ್ ಕೇಪ್ ಟೌನ್ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದರು. ಇದರ ಪರಿಣಾಮವಾಗಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸೇರಿದಂತೆ ಬ್ಯಾಂಕ್ಟೋಫ್ಟ್ ನಿಷೇಧಕ್ಕೆ ಒಳಗಾದರು.
ಗೇಲ್ ಪ್ರಕರಣ: ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಜಯ ಪಡೆದಿದ್ದು, ಈ ಕುರಿತು ತೀರ್ಪು ನೀಡಿರುವ ಕೋರ್ಟ್ ಗೇಲ್‍ಗೆ 3,00,000 ಆಸ್ಟ್ರೇಲಿಯನ್ ಡಾಲರ್ ಹಣ (ಸುಮಾರು 2.10 ಕೋಟಿ ರೂ.) ದಂಡವಾಗಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ. 2015ರಲ್ಲಿ ವಿಶ್ವಕಪ್ ವೇಳೆ ಕ್ರಿಸ್‍ಗೇಲ್ ತಂಗಿದ್ದ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದ ಮಹಿಳಾ ಮಸಾಜ್ ಥೆರಪಿಸ್ಟ್ ನೊಂದಿಗೆ ಗೇಲ್ ಆಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ಮಹಿಳೆಗೆ ಗೇಲ್ ತಮ್ಮ ಜನನಾಂಗವನ್ನು ತೋರಿಸಿದ್ದರು ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು. ಈ ಕುರಿತು ಗೇಲ್ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಫ್ರಾನ್ಸ್ ಚಾಂಪಿಯನ್: ಜುಲೈ 16 ರಂದು ಮಾಸ್ಕೋದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೋವೇಷಿಯಾ ವಿರುದ್ಧ ಫ್ರಾನ್ಸ್ ಜಯಗಳಿಸಿತ್ತು. ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ 4-2 ಗೋಲುಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚಾಂಪಿಯನ್ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ಜೇಬಿಗಿಳಿಸಿತ್ತು. ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ಬಹುಮಾನ ಪಡೆದಿತ್ತು. ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಷಿಯಾ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv