2018ಕ್ಕೆ ಬೈ ಹೇಳಿ ಎಲ್ಲರೂ 2019ರತ್ತ ಹೆಜ್ಜೆ ಹಾಕುತ್ತಿದ್ದೇವೆ. ಕಲರ್ ಫುಲ್ ದುನಿಯಾ ಅಂದ್ರೆ ಸಿನಿ ಲೋಕ. ಈ ಬಣ್ಣದ ಲೋಕ 2018ರಲ್ಲಿ ಹಲವು ವಿಷಯಗಳನ್ನು ಹೊರಹಾಕಿತು. ಕೆಲವು ಸಿನಿಮಾಗಳು ವಿವಾದದಲ್ಲಿಯೇ ಸದ್ದು ಮಾಡಿದ್ರೆ, ಮತ್ತೆ ಕೆಲವು ತಮ್ಮ ಕಥೆಯಿಂದಲೇ ಇಡೀ ದೇಶವನ್ನೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿತು. ಕೆಲ ಕಲಾವಿದರು ತಮ್ಮ ಖಾಸಗಿ ಜೀವನದಿಂದಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡರು.
ಇತ್ತ ಕಿರಿಕ್ ಪಾರ್ಟಿ ಮೂಲಕವೇ ಮನೆ ಮಾತಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಸುದ್ದಿ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇನ್ನು ಮೀಟೂ ವೇದಿಕೆಯಲ್ಲಿ ಕನ್ನಡದ ನಟಿಯರು ತಮಗಾದ ಕಿರುಕುಳವನ್ನು ಹಂಚಿಕೊಂಡಿದ್ದುಂಟು. ನಟಿ ಶೃತಿ ಹರಿಹರನ್ ದಕ್ಷಿಣ ಭಾರತದ ಸ್ಪುರದ್ರೂಪಿ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದರು. ದುನಿಯಾ ವಿಜಯ್ ಜೈಲು ಸೇರಿದಂತೆ ವಿಜಿ ಪತ್ನಿಯರಿಬ್ಬರ ಜಗಳ ಹೊರ ಬಂದಿತ್ತು. ಹೀಗೆ ದರ್ಶನ್ ಕಾರ್ ಅಪಘಾತ, ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣ, ದಿ ವಿಲನ್, ರಾಜರಥ ಸಿನಿಮಾ ವಿವಾದ ಎಲ್ಲವು 2018ರ ಪುಟದಲ್ಲಿ ಸೇರಿಕೊಂಡಿವೆ. 2018ರ ಸಿನಿ ಅಂಗಳದ ಟಾಪ್ ಸ್ಟೋರಿಗಳು ಈ ಕೆಳಗಿನಂತಿವೆ. ಇದನ್ನೂ ಓದಿ: 2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು
Advertisement
1. ಪದ್ಮಾವತ್:
ದೀಪಿಕಾ ಪಡುಕೋಣೆ ನಟಿಸಿರುವ ಐತಿಹಾಸಿಕ ಕಥೆಯನ್ನು ಹೊಂದಿರುವ `ಪದ್ಮಾವತ್’ ಸಿನಿಮಾ ಜನವರಿ 25ರಂದು ತೆರೆಕಂಡಿತ್ತು. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಮತ್ತು ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಪದ್ಮಾವತ್ ಸಿನಿಮಾ ಸಾಕಷ್ಟು ವಿವಾದಗಳಿಂದಲೇ ಸುದ್ದಿ ಮಾಡಿದತ್ತು. ಎಂಟು ದಿನಗಳಲ್ಲಿ 200 ಕೋಟಿಗೂ ಅಧಿಕ ಹಣವನ್ನು ಗಳಿಸಿ ಯಶಸ್ಸಿನತ್ತ ಮುನ್ನುಗ್ಗಿತ್ತು.
Advertisement
Advertisement
2. ರಾಜರಥ ಸಿನಿಮಾ:
ತೆಲುಗು ಭಾಷೆಯ ಬಾಹುಬಲಿ ಸಿನಿಮಾಗೆ ಠಕ್ಕರ್ ನೀಡಿದ ಸಿನಿಮಾ ರಂಗಿತರಂಗ. ರಾಜ್ಯದಲ್ಲಿ ಬಾಹುಬಲಿ ಸದ್ದು ಮಾಡುತ್ತಿದ್ದಾಗಲೇ ತೆರೆಕಂಡಿದ್ದ ರಂಗಿತರಂಗ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಗೆಲುವು ಸಾಧಿಸಿತ್ತು. ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಸೋದರರ ಸಾರಥ್ಯದಲ್ಲಿ ಮೂಡಿಬಂದಿದ್ದ ರಂಗಿತರಂಗ ಚಿತ್ರವನ್ನು ಕರುನಾಡಿನ ಜನ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು
Advertisement
ಇದೇ ಜೋಡಿಯ ಮತ್ತೊಂದು ಚಿತ್ರ ರಾಜರಥ 2018 ಏಪ್ರಿಲ್ ನಲ್ಲಿ ಬಿಡುಗಡೆಗೆ ಸಿದ್ಧಗೊಂಡಿತ್ತು. ಸಿನಿಮಾ ಪ್ರಮೋಷನ್ ಗಾಗಿ ಆರ್.ಜೆ. ರ್ಯಾಪಿಡ್ ರಶ್ಮಿ ನಡೆಸಿಕೊಡುವ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಚಿತ್ರ ತಂಡ ಭಾಗಿಯಾಗಿತ್ತು. ಕಾರ್ಯಕ್ರಮದಲ್ಲಿ ಡ್ಯಾಷಿಂಗ್ ಸುತ್ತಿನಲ್ಲಿ ರಶ್ಮಿ, ರಾಜರಥ ಸಿನಿಮಾ ನೋಡದವ್ರು ಡ್ಯಾಶ್ ಎಂದು ಬಿಟ್ಟ ಸ್ಥಳ ತುಂಬುವಂತೆ ಹೇಳಿದರು. ಈ ವೇಳೆ ನಟ ನಿರೂಪ್ ಭಂಡಾರಿ, ಕಚಡಾ, ಲೋಫರ್ ನನ್ನ್ಮಕ್ಕಳು ಅಂತಾ ಹೇಳಿದ್ದು ದೊಡ್ಡ ವಿವಾದವಾಗಿತ್ತು. ಕೊನೆಗೆ ರಶ್ಮಿ, ನಟ ನಿರೂಪ್ ಭಂಡಾರಿ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಚಲನಚಿತ್ರ ಮಂಡಳಿಯಲ್ಲಿ ಸುದ್ದಿಗೋಷ್ಠಿ ಕರೆದು ಕ್ಷಮೆ ಕೇಳಿದರು.
3. ಸಲ್ಮಾನ್ ಖಾನ್:
ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ಸಿಜೆಎಂ ಕೋರ್ಟ್ ತೀರ್ಪು ನೀಡಿತ್ತು. 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಸಲ್ಮಾನ್‍ಗೆ ನ್ಯಾಯಾಧೀಶ ರವೀಂಧರ್ ಜೋಶಿ ಅವರು ಷರತ್ತು ಬದ್ಧ ಜಾಮೀನು ನೀಡಿದ್ದರು. 50 ಸಾವಿರ ರೂ. ಎರಡು ಬಾಂಡ್ ಗಳನ್ನು ಸಲ್ಲಿಸಬೇಕು. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.
4. ರಕ್ಷಿತ್-ರಶ್ಮಿಕಾ ಬ್ರೇಕಪ್
2016 ಡಿಸೆಂಬರ್ ನಲ್ಲಿ ಬಿಡುಗಡೆಗೊಂಡ ಚಿತ್ರ ಕಿರಿಕ್ ಪಾರ್ಟಿ. ಈ ಚಿತ್ರದ ಮೂಲಕ ಹೊರಬಂದ ಮುದ್ದಾದ ಜೋಡಿಯೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಅಭೂತಪೂರ್ವ ಯಶಸ್ಸು ಕಂಡ ಈ ಸಿನಿಮಾದಲ್ಲಿ ಕರ್ಣ ಮತ್ತು ಸಾನ್ವಿ ಪಾತ್ರಧಾರಿಗಳು ಕರುನಾಡಿದ ಜನಮನದಲ್ಲಿ ಅಚ್ಚು ಉಳಿದಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಪ್ರೇಮ ಚಿಗುರಿ ನಿಶ್ಚಿತಾರ್ಥದ ಉಂಗುರವನ್ನ ಪರಸ್ಪರ ಬದಲಿಸಿಕೊಳ್ಳುವ ಮುಂದೆ ಮದುವೆ ಆಗಲಿದ್ದೇವೆ ಅಂತಾ ಜೋಡಿ ಹೇಳಿಕೊಂಡಿತ್ತು. ಮೊದಲ ಸಿನಿಮಾದಲ್ಲಿ ನಿರ್ದೇಶಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ರಶ್ಮಿಕಾರಿಗೆ ಸಾಲು ಸಾಲು ಸಿನಿಮಾಗಳು ಅರಸಿ ಬಂದವು. ಪುನೀತ್ ರಾಜ್‍ಕುಮಾರ್, ಗಣೇಶ್, ತೆಲುಗಿನ ವಿಜಯದೇವರಕೊಂಡ ಜೊತೆಯಲ್ಲಿ ನಟಿಸಿ ಸೈ ಅನ್ನಿಸಿಕೊಂಡರು. ಇದನ್ನೂ ಓದಿ: 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು
ಅದೇಕೋ ಏನೋ ಗೊತ್ತಿಲ್ಲ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಮತ್ತು ರಕ್ಷಿತ್ ದೂರವಾಗ್ತಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಗಲ್ಲಿಗಳಲ್ಲಿ ಹರಿದಾಡಿತು. ಕೊನೆಗೆ ರಶ್ಮಿಕಾರ ತಾಯಿ ಹೌದು, ಅವರಿಬ್ಬರು ಬೇರೆ ಆಗ್ತಿದ್ದಾರೆ ಎಂಬ ಸ್ಪಷ್ಟನೆಯನ್ನು ನೀಡಿದರು. ಈ ಬಗ್ಗೆ ಇಬ್ಬರು ಕಲಾವಿದರು ಕಾರಣಾಂತರಗಳಿಂದ ದೂರವಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು.
5. ದರ್ಶನ್ ಕಾರ್ ಅಪಘಾತ:
ಮೈಸೂರಿನ ಹೊರವಲಯದ ಹಿನಕಲ್ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ ನಡೆದಿದ್ದು, ದರ್ಶನ್ ಅವರ ಬಲಗೈ ಮೂಳೆ ಮುರಿದಿತ್ತು. ಬಳಿಕ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹಿರಿಯ ನಟ ದೇವರಾಜ್, ಅವರ ಮಗ ಪ್ರಜ್ವಲ್ ದೇವರಾಜ್ ಅವರು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು.
6. ವೀರ ಮದಕರಿ ವಿವಾದ:
ಸುದೀಪ್ ಮತ್ತು ದರ್ಶನ್ ಒಂದೇ ಕತೆಯ ಸಿನಿಮಾದಲ್ಲಿ ನಟನೆಗೆ ಒಪ್ಪಿಕೊಂಡಿದ್ದಾರೆ. ಎರಡು ಸಿನಿಮಾಗಳ ರೂಪದಲ್ಲಿ ಚಿತ್ರದುರ್ಗದ ಪಾಳೆಗಾರ ವೀರ ಮದಕರಿ ನಾಯಕ ಪಾತ್ರದಲ್ಲಿ ದರ್ಶನ್ ಮತ್ತು ಸುದೀಪ್ ನಟಿಸುತ್ತಿದ್ದಾರೆ. ಸುದೀಪ್ ಟ್ವಿಟ್ಟರ್ ಪತ್ನಿ ಪ್ರಿಯಾರ ನಿರ್ಮಾಣದಲ್ಲಿ ವೀರ ಮದಕರಿ ಆಗಲಿದ್ದೇನೆ ಎಂದು ತಿಳಿಸಿದ್ದರು. ಇತ್ತ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ರಾಜೇಂದ್ರ ಸಿಂಗ್‍ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರ ಬಂತು. ಈ ವೇಳೆ ನಾಯಕ ನಟರ ಅಭಿಮಾನಿಗಳಲ್ಲಿ ಗೊಂದಲ ಉಂಟಾಯಿತು.
ರಾಕ್‍ಲೈನ್ ವೆಂಕಟೇಶ್ ಅವರು `ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ
7. ಚಂದನವನದಲ್ಲಿ ಮೀಟೂ ಸಂಚಲನ:
ಈ ವರ್ಷ ಚಂದನವನವನ್ನೇ ಅಲುಗಾಡಿಸಿದ್ದು, ಮೀಟೂ ಆರೋಪ. ನಟಿ ಶೃತಿ ಹರಿಹರನ್ ದಕ್ಷಿಣ ಭಾರತದ ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ದೊಡ್ಡ ಸದ್ದು ಮಾಡಿತ್ತು. ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಡಿನ್ನರ್ ಗೆ ಅಂತಾ ಕರೆದಿದ್ದರು ಎಂದು ಪತ್ರಿಕೆ ನೀಡಿದ ಸಂದರ್ಶನದಲ್ಲಿ ಹೊರಹಾಕಿದ್ದರು. ಈ ಸಂಬಂಧ ದಿವಂಗತ ಅಂಬರೀಶ್ ಅವರ ನೇತೃತ್ವದಲ್ಲಿ ಸಂಧಾನ ಸಭೆಯನ್ನ ಮಾಡಲಾಗಿತ್ತು. ಆದ್ರೆ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರಿಂದ ಸಂಧಾನ ಸಭೆ ವಿಫಲವಾಗಿತ್ತು. ನಂತರ ಪ್ರಕರಣ ಹಲವು ಏರಳಿತ ಕಂಡು ತನಿಖೆ ಹಾದಿಯಲ್ಲಿದೆ.
ಮೀಟೂ ವೇದಿಕೆಯಲ್ಲಿ ನಟಿ ಸಂಗೀತಾ ಭಟ್ ಮತ್ತು ಸಂಜನಾ ಗಲ್ರಾನಿ ತಮಗಾದ ಲೈಂಗಿಕ ಕಿರುಕುಳವನ್ನು ಹಂಚಿಕೊಂಡಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿರುವ ಸಂಗೀತಾ ಭಟ್, ಎಲ್ಲಿಯೂ ಕಿರುಕುಳ ನೀಡಿದ ನಿರ್ಮಾಪಕ ಅಥವಾ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ಇತ್ತ ಸಂಜನಾ ಗಲ್ರಾನಿ ತಮಗೆ ಗಂಡ-ಹೆಂಡತಿ ಸಿನಿಮಾದಲ್ಲಿ ಅನಾವಶ್ಯಕವಾಗಿ ಕಿಸ್ ಸೀನ್ ಮಾಡಿಸಲಾಗಿತ್ತು ಎಂದು ನಿರ್ದೇಶಕ ರವಿ ಶ್ರೀವಾತ್ಸ ವಿರುದ್ಧ ಆರೋಪ ಮಾಡಿದ್ದರು. ಈ ಸಂಬಂಧ ರವಿ ಶ್ರೀವಾತ್ಸ್ ಪಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು. ಫಿಲ್ಮ್ ಚೆಂಬರ್ ನಡೆದ ಸಭೆ ನಡೆದಿತ್ತು. ಕೊನೆಗೆ ಹಿರಿಯರ ಸಲಹೆಯಂತೆ ಸಂಜನಾ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಗೆ ಬೆಂಬಲ ವ್ಯಕ್ತಪಡಿಸಿದ್ದ ನಟ ಚೇತನ್ ವಿರುದ್ಧ ಐಶ್ವರ್ಯಾ ಸರ್ಜಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
8. ದುನಿಯಾ ವಿಜಯ್:
ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿತ್ತು.
ಸೆಪ್ಟೆಂಬರ್ 23ರಂದು ಬಂಧನಕ್ಕೊಳಗಾಗಿದ್ದ ದುನಿಯಾ ವಿಜಿಗೆ ಅಕ್ಟೋಬರ್ 1ರಂದು 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365 (ಕಿಡ್ನಾಪ್), 342 (ಅಕ್ರಮ ಬಂಧನ), 325 (ಹಲ್ಲೆ), 506 (ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ.
ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಹೊರ ಬಂದ ನಟ ದುನಿಯಾ ವಿಜಯ್ ಪತ್ನಿಯರಿಬ್ಬರ ಜಗಳವೇ ದೊಡ್ಡ ತಲೆನೋವಾಗಿತ್ತು. ವಿಜಯ್ ಜೈಲು ಸೇರಿದಾಗ ಮನೆಗೆ ಬಂದ ಮೊದಲ ಪತ್ನಿ ನಾಗರತ್ನ ಸವತಿ ಕೀರ್ತಿ ಗೌಡರ ಮೇಲೆ ಹಲ್ಲೆ ನಡೆಸಿದ್ದರು. ವಿಜಯ್ ಮೊದಲ ಪುತ್ರಿ ಚಿಕ್ಕಮ್ಮಳಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂಬ ದೂರನ್ನು ಸಲ್ಲಿಸಿದರು. ಇದೇ ರೀತಿ ಒಬ್ಬರ ಮೇಲೊಬ್ಬರು ದೂರು ನೀಡುತ್ತಾ ಸುದ್ದಿಯಾದ್ರು.
9. ವಿಷ್ಣು ಸ್ಮಾರಕ ವಿವಾದ:
ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಕೂಗು ಕೇಳಿ ಬಂತು. ಸರ್ಕಾರವು ಸಹ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆಯನ್ನು ಸೂಚಿಸಿತು. ಈ ಎಲ್ಲ ಬೆಳವಣಿಗೆಯ ನಂತರ ದಿ.ವಿಷ್ಣುವರ್ದನ್ ಅಳಿಯ ಅನಿರುದ್ಧ, ಅಪ್ಪಾಜಿ ಸ್ಮಾರಕ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಈ ಹೇಳಿಕೆಯ ಬೆನ್ನಲ್ಲೇ ವಿಷ್ಣು ಸ್ಮಾರಕ ವಿಷಯ ಜೀವವನ್ನು ಪಡೆದುಕೊಂಡಿತು.
ಹಲವು ಬೆಳವಣಿಗೆಯನ್ನು ಕಂಡ ಈ ವಿವಾದವನ್ನು ಸಿಎಂ ಕುಮಾರಸ್ವಾಮಿ ಆದಷ್ಟು ಬೇಗ ಪರಿಹರಿಸಲಾಗುವುದು ಅಂತ ಭರವಸೆ ನೀಡಿದ್ದಾರೆ. ಇತ್ತ ವಿಷ್ಣು ಕುಟುಂಬ ಡಿಸೆಂಬರ್ ವರೆಗೂ ಸಮಯವನ್ನು ಸರ್ಕಾರಕ್ಕೆ ನೀಡಿದೆ.
10. ದಿ ವಿಲನ್ ಮತ್ತು ಕೆಜಿಎಫ್: ಈ ವರ್ಷದ ಚಂದನವನದಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದ ಚಿತ್ರಗಳು ದಿ ವಿಲನ್ ಮತ್ತು ಕೆಜಿಎಫ್. ನವೆಂಬರ್ ನಲ್ಲಿ ಬಿಡುಗಡೆಯಾದ ದಿ ವಿಲನ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ತು. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್, ಆ್ಯಮಿ ಜಾಕ್ಸನ್ ಸೇರಿದಂತೆ ಬಹುತಾರಾಗಣವನ್ನ ಹೊಂದಿತ್ತು. ಇಂದಿಗೂ ದಿ ವಿಲನ್ ಹಾಡುಗಳು ಬಹುಪಾಲರ ಮೆಚ್ಚುಗೆಯನ್ನು ಪಡೆದುಕೊಂಡಿವೆ.
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಇಡೀ ಭಾರತವೇ ಸ್ಯಾಂಡಲ್‍ವುಡ್ ನತ್ತ ತಿರುಗಿ ನೋಡುವಂತೆ ಮಾಡಿತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ 100 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv