ಮಡಿಕೇರಿ: ಕೊಡಗಿನ ಸಾವಿರಾರು ಜನರ ಪಾಲಿಗೆ 2018 ಎಂದೂ ಮರೆಯಲಾರದಂತ ದುರಂತದ ವರ್ಷ. ಅಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಅಂದಿನಿಂದ ಬಾಡಿಗೆ ಮನೆಯಲ್ಲೋ ಸಂಬಂಧಿಕರ ಮನೆಯಲ್ಲೋ ದಿನ ದೂಡುತ್ತಿದ್ದರು. ಸರ್ಕಾರ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಎರಡು ವರ್ಷಗಳ ಬಳಿಕ ಕೊನೆಗೂ ಸಂತ್ರಸ್ತರು ಮನೆ ದೊರೆತ ಸಂತಸದಲ್ಲಿದ್ದಾರೆ.
ಹೌದು. 2018ರ ಮಹಾಮಳೆಗೆ ಕೊಡಗಿನ ಸಾವಿರಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಬೀದಿಗೆ ನಿಲ್ಲಿಸಿ ಎರಡು ವರ್ಷಗಳೇ ಕಳೆದುಹೋಗಿದ್ದವು. ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪ್ರತೀ ಸಂತ್ರಸ್ತರಿಗೆ ಆರು ತಿಂಗಳಲ್ಲೇ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಸಂತ್ರಸ್ತರಿಗೆ ಸ್ವಂತ ಸೂರು ಸೇರುವ ಭಾಗ್ಯ ಮಾತ್ರ ಕೂಡಿ ಬಂದಿರಲಿಲ್ಲ.
ಕೊನೆಗೂ ಎರಡು ವರ್ಷಗಳ ಬಳಿಕ ಇಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕಂದಾಯ ಸಚಿವ ಆರ್ ಅಶೋಕ್ 483 ಸಂತ್ರಸ್ತರಿಗೆ ಇಂದು ಮನೆ ಹಸ್ತಾಂತರಿಸಿದರು. ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ನಿರ್ಮಿಸಿರುವ 383 ಮತ್ತು ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ನಿರ್ಮಿಸಿರುವ 80 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಸಚಿವ ಆರ್. ಅಶೋಕ್ ಅವರು ಜಂಬೂರಿನ ಕಾರ್ಯಪ್ಪ ಬಡಾವಣೆಯ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರೆ, ಉಸ್ತುವಾರಿ ಸಚಿವ ವಿ ಸೋಮಣ್ಣ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಜೊತೆಗೆ ಸಾಂಕೇತಿಕವಾಗಿ ಮನೆಯೊಂದರ ಟೇಪ್ ಕತ್ತರಿಸಿ ಬಳಿಕ ಮನೆಯ ಕೀಲಿಯನ್ನು ಫಲಾನುಭವಿಗೆ ವಿತರಣೆ ಮಾಡಿದರು.
ಮನೆ ಕಳೆದುಕೊಂಡು ಎರಡು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ಬದುಕಿದ್ದೆವು. ಆರು ತಿಂಗಳಲ್ಲಿಯೇ ಮನೆ ಕೊಡುವುದಾಗಿ ಹೇಳಿದ್ದ ಸರ್ಕಾರ ಒಂದು ಮಳೆಗಾಲ ಕಳೆದರೂ ಮನೆ ಕೊಟ್ಟಿರಲಿಲ್ಲ. ಈ ಬಾರಿಯೂ ಮಳೆಗಾಲ ಆರಂಭವಾಗಿದ್ದು ನಮಗೆ ಸದ್ಯಕ್ಕೆ ಮನೆ ಸಿಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿತ್ತು. ಇದೀಗ ಮಳೆಗಾಲ ಆರಂಭವಾಗಿರುವಾಗಲೇ ಮನೆಗಳನ್ನು ನೀಡಿರುವುದು ಸಂತೋಷವಾಗುತ್ತಿದೆ ಎಂದು ಸಂತ್ರಸ್ತರು ಸಂತಸ ಹಂಚಿಕೊಂಡರು.
ಕೊಟ್ಟಿರುವ ಮನೆಗಳು ಚಿಕ್ಕ ಚಿಕ್ಕ ಕೊಠಡಿಗಳನ್ನು ಹೊಂದಿವೆ. ಆದರೆ ಇಷ್ಟಾದರೂ ಮಾಡಿಕೊಟ್ಟಿದ್ದಾರೆ ಎಂಬ ಸಮಾಧಾನದಲ್ಲಿ ಬದುಕಬೇಕಾಗಿದೆ ಎಂದು ಫಲಾನುಭವಿಗಳು ಸಂತಸ ಪಟ್ಟರು. ಮತ್ತೊಂದೆಡೆ ಮನೆಗಳ ಕಾಮಗಾರಿಗೆ ಚಾಲನೆ ನೀಡಿದ್ದ, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೂಡ ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಸೌಜನ್ಯಕ್ಕಾದರೂ ಆಹ್ವಾನಿಸಬೇಕಾಗಿತ್ತು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ತಿಂಗಳ ಹಿಂದೆಯೇ ಮಡಿಕೇರಿ ಸಮೀಪದ ಕರ್ಣಂಗೇರಿಯಲ್ಲಿ 35 ಮನೆಗಳನ್ನು ಹಸ್ತಾಂತರ ಮಾಡಿದ್ದ ಸರ್ಕಾರ ಇದೀಗ ಜಂಬೂರು ಮತ್ತು ಮದೆನಾಡಿನಲ್ಲಿ 483 ಮನೆಗಳನ್ನು ಹಸ್ತಾಂತರಿಸಿದೆ. ಆದರೆ ಗಾಳಿಬೀಡು, ಬಿಳಿಗೇರಿ ಸೇರಿದಂತೆ ಹಲವೆಡೆ ಇನ್ನೂ 200ಕ್ಕೂ ಹೆಚ್ಚು ಮನೆಗಳ ನಿರ್ಮಾಣವಾಗಬೇಕಾಗಿದೆ. ಹೀಗಾಗಿ ಉಳಿದ ಸಂತ್ರಸ್ತರಿಗೆ ಯಾವಾಗ ಮನೆ ಸಿಗುತ್ತೋ ಎಂಬ ಚಿಂತೆಯೂ ಇದೆ.