KarnatakaLatestMain PostTumakuru

2013ರಲ್ಲಿ ಸೋತಾಗ ನನಗೂ ನೋವಾಗಿತ್ತು- ಸಿದ್ದು ಸೋಲಿನ ಬಗ್ಗೆ ಪರಮೇಶ್ವರ್ ಮಾತು

– ಪಕ್ಷದವರೇ ಸೋಲಿಸಿದ್ದಕ್ಕೆ ಯಾವುದೇ ವರದಿ ಬಂದಿಲ್ಲ

ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನ ಸ್ವಪಕ್ಷದವರೇ ಪಿತೂರಿ ಮಾಡಿ ಸೋಲಿಸಿದರು ಎನ್ನುವುದಕ್ಕೆ ಪಕ್ಷಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ತಿಳಿಸಿದರು.

ಸಿದ್ದರಾಮಯ್ಯನವರ ಹೇಳಿಕೆ ಕುರಿತು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಗೆದ್ದಾಗ ಯಾರೂ ಯಾರ ಮೇಲೂ ಆರೋಪ ಮಾಡಲ್ಲ. ಸೋತಾಗ ನೋವಿಂದ ಇಂತಹ ಹೇಳಿಕೆಗಳು ಬರುತ್ತವೆ. ಅಲ್ಲದೆ ಸಿದ್ದರಾಮಯ್ಯನವರು ಸೋತಿದ್ದು ದುರಾದೃಷ್ಟಕರ. ಅವರು ಸೋಲುತ್ತಾರೆಂದು ನಾವು ಊಹೆ ಮಾಡಿರಲಿಲ್ಲ. ನಮ್ಮವರೇ ನಮಗೆ ಚೂರಿ ಹಾಕಿದ್ರು ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಮೈಸೂರು ಜಿಲ್ಲೆಯ ರಾಜಕಾರಣ ಅವರಿಗೇ ಸಿಮಿತವಾಗಿರೋದು ಅದನ್ನ ಆವರೇ ವಿಶ್ಲೇಷಣೆ ಮಾಡಬೇಕು. ಅಲ್ಲಿಯ ಎಲ್ಲ ಕಾಂಗ್ರೆಸ್ ನಾಯಕರು ಅವರ ಗೆಲುವಿಗೆ ಶ್ರಮಿಸಿದ್ದಾರೆ. ಯಾರೂ ಅವರ ಪರವಾಗಿ ಕೆಲಸ ಮಾಡಿಲ್ಲ ಎಂಬ ಯಾವ ಮಾಹಿತಿಯೂ ನಮಗೆ ಬಂದಿಲ್ಲ. 2013ರಲ್ಲಿ ಸೋತಾಗ ನನಗೂ ನೋವಾಗಿತ್ತು. ನಮ್ಮವರೇ ನಮಗೆ ಪಿತೂರಿ ಮಾಡಿದ್ದಾರೆ ಎಂದು ನಾನೂ ಅಂದುಕೊಂಡಿದ್ದೆ. ಹೀಗಾಗಿ ಆ ನೋವು ಸ್ವಾಭಾವಿಕ ಎಂದು ತಿಳಿಸಿದರು.

2013ರಲ್ಲಿ ಕೊರಟಗೆರೆ ಸೋಲಿನ ಬಗ್ಗೆ ಸಿದ್ದರಾಮಯ್ಯ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂಬ ಎಚ್‍ಡಿಕೆ ಹೇಳಿಕೆ ರಾಜಕೀಯವಾದದ್ದು. ಬೇರೆ ಪಕ್ಷದವರ ಹೇಳಿಕೆ ಬಗ್ಗೆ ನಾನು ಮಾತಾಡಲ್ಲ. ಇದು ಅವರಿಗೆ ಶೋಭೆ ತರುವಂತಹದ್ದಲ್ಲ. ಕುಮಾರಸ್ವಾಮಿ ಅವರು ನನಗೂ ಸಿದ್ದರಾಮಯ್ಯನವರಿಗೂ ವ್ಯತ್ಯಾಸ ತರಲು ಮಾತನಾಡಿರಬಹುದು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ವರಿಷ್ಠರ ನಿರ್ಧಾರವೇ ಹೊರತು ಯಾರ ವೈಯಕ್ತಿಕ ತೀರ್ಮಾನ ಅಲ್ಲ. ನಾನು ಅಂದು ಅಧ್ಯಕ್ಷನಾಗಿದ್ದೆ ನನ್ನ ಅಭಿಪ್ರಾಯ ಸೇರಿದಂತೆ ಎಲ್ಲ ನಾಯಕರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ಇದರ ಕ್ರೆಡಿಟ್ ಯಾರು ಬೇಕಾದರೂ ತಗೋಬಹುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button