2006ರ ಶೂಟಿಂಗ್ ನೆನಪಿಸಿ ರಾಜಣ್ಣನ ನೆನೆದು ಭಾವುಕರಾದ ಜಗ್ಗೇಶ್

Public TV
2 Min Read
FotoJet 6 16

ಬೆಂಗಳೂರು: ಇಂದು ವರನಟ ಡಾ. ರಾಜ್‍ಕುಮಾರ್‍ರವರ 15ನೇ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆ ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಅಂದಿನ ಹಳೆಯ ನೆನಪುಗಳನ್ನು ಮೆಲುಕುಹಾಕಿಕೊಂಡಿದ್ದಾರೆ.

rajkumar

ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಏಪ್ರಿಲ್ 2006 ಮಧ್ಯಾಹ್ನ 1 ಗಂಟೆಗೆ ಪಾಂಡವರು ಚಿತ್ರದ ಊಟದ ವಿರಾಮ. ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆ. ಅಂದು ಅಂಬರೀಶ್‍ರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯವಸ್ಥೆ ಇತ್ತು. ಅಂದು ಅಂಬರೀಶ್‍ರವರೇ ಎಲ್ಲರಿಗೂ ಪ್ರೀತಿಯಿಂದ ಊಟ ಬಡಿಸಿ ತಾವು ತಿಂದರು. ಆಗ ಕ್ಯಾರಾವಾನ್ ವ್ಯವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ ಎಸಿ ಹಾಕಿ ವಿಶ್ರಾಂತಿ ಪಡೆಯುವ ಅಭ್ಯಾಸ.

ನಾನು ಊಟ ಆದಮೇಲೆ 1/2 ಗಂಟೆ ಮಲಗುವೆ. ನನಗೆ ತೊಂದರೆಕೊಡದಂತೆ ಸಹಾಯಕರು ಕಾವಲು ಇರುತ್ತಾರೆ. ನಾನು ಏಳುವವರೆಗೂ ಯಾರು ಹತ್ತಿರಬರುವುದಿಲ್ಲ. ಆ ನಂಬಿಕೆಯಲ್ಲೆ ನಿದ್ರೆಗೆ ಜಾರಿದೆ. ಇದ್ದಕ್ಕಿದಂತೆ ವಾಂತಿಬಾಬು ಕಿಟಕಿ ಜೋರಾಗಿ ತಟ್ಟಿದ. ನನ್ನ ಸಿಟ್ಟು ನೆತ್ತಿಗೇರಿತು. ಕಾರಣ ಕೇಳಲು ಬಾಗಿಲು ತೆರೆದೆ. ವಾಂತಿ ಬಾಬು ರಾಜಣ್ಣ ಹೋಗಿಬಿಟ್ಟರು ಎಂದ. ಕೆಲ ನಿಮಿಷ ಏನು ಕಾಣಲಿಲ್ಲ, ಕೇಳಲಿಲ್ಲ. ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗೂ ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗೂ ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗೂ ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೇ ಲೀನವಾದರು. ಮತ್ತೆ ಬನ್ನಿ ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *