ಚಿಕ್ಕಮಗಳೂರು: ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ತಮ್ಮೊಂದಿಗಿನ ವಡನಾಟವನ್ನೂ ಮೆಲುಕು ಹಾಕುತ್ತಿದ್ದಾರೆ. ಅದೇ ರೀತಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ಶ್ರೀಗಳು ಸಹ ತಮ್ಮ ಬಳಿ ಎಸ್‍ಪಿಬಿ ಹೇಳಿದ್ದ ಗುಟ್ಟಿನ ಕುರಿತು ಹೇಳಿದ್ದಾರೆ.
ಕೊರೊನಾ ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿರುವ ಶ್ರೀಗಳು ಅಲ್ಲಿಂದಲೇ ಗಾನಗಂಧರ್ವನ ಕುರಿತು ಮಾತನಾಡಿದ್ದಾರೆ. ಎಸ್‍ಪಿಬಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಹೆಸರು ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ ಎಂದು, ನಾನು ಆರಾಧಿಸೋದು ವೀರಭದ್ರಸ್ವಾಮಿಯನ್ನು, ನಮ್ಮದು ವೀರಭದ್ರಸ್ವಾಮಿಯನ್ನು ಆರಾಧಿಸುವ ಮನೆತನ ಎಂದು ಹೇಳಿದ್ದರಂತೆ. 2006ರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ ಗುಟ್ಟನ್ನು ರಂಭಾಪುರಿ ಶ್ರೀಗಳು ಇದೀಗ ನೆನೆದಿದ್ದಾರೆ.
ಸೌಜನ್ಯಶೀಲ ಹಿನ್ನೆಲೆಯ ಗಾಯಕ ಬಾಲಸುಬ್ರಹ್ಮಣ್ಯಂ ಅವರ ನಿಧನದ ವಿಷಯ ಕೇಳಿ ಅತ್ಯಂತ ನೋವಾಗಿದೆ. ಎಸ್‍ಪಿಬಿ ಅವರು 15 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಸುಮಧುರ ಕಂಠದಿಂದ ಹಾಡಿದ ಶ್ರೇಯಸ್ಸು ಅವರದ್ದು. ಕನ್ನಡದಲ್ಲಿ ಅವರು ಹಾಡಿದ ಭಕ್ತಿಗೀತೆಗಳು ಜನಮನ ಮುಟ್ಟಿದ್ದು, ನಾವು ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಹಾಡಿದ ಚಿತ್ರಗೀತೆಗಳು ಕೂಡ ಜನರ ಮನಸ್ಸಲ್ಲಿ ಸದಾ ಹಚ್ಚಹಸಿರಾಗಿವೆ ಎಂದಿದ್ದಾರೆ.
ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶೀಖಾಮಣಿಯ ಶ್ಲೋಕಗಳನ್ನು ರಾಗ-ಲಯ ಬದ್ಧವಾಗಿ ಹಾಡಿ ಅದಕ್ಕೆ ಕನ್ನಡದಲ್ಲಿ ಸರಳವಾಗಿ ಅರ್ಥವನ್ನೂ ಹೇಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಾಳೆಹೊನ್ನೂರಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದರ್ಶನವನ್ನೂ ಮಾಡಿ ಸಂದರ್ಶನಕ್ಕೆ ಬಂದಾಗ ಗುಟ್ಟಿನ ಮಾತು ಹೇಳಿ ಸಂತೋಷಗೊಳಿಸಿದ್ದರು.
ವೀರಭದ್ರಸ್ವಾಮಿ ನನ್ನ ಆರಾಧ್ಯ ದೈವ. ನಮ್ಮದು ವೀರಭದ್ರಸ್ವಾಮಿಯನ್ನೇ ಆರಾಧಿಸುವ ಮನೆತನ. ನನ್ನ ಹೆಸರು ಶ್ರೀಪತಿ ಪಂಡಿತರಾಧ್ಯ ಬಾಲಸುಬ್ರಹ್ಮಣ್ಯಂ ಇದು ನನ್ನ ಪೂರ್ಣ ಹೆಸರು ಎಂದು ಹೇಳಿದ್ದರು. ಶಿವ ಭಕ್ತರಾದ ಮತ್ತು ವೀರಶೈವ ಪರಂಪರೆಯಲ್ಲಿ ಹುಟ್ಟಿದ ಅವರು ಎಲ್ಲ ವರ್ಗದ ಎಲ್ಲ ಸಮುದಾಯದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಂತಹ ಶ್ರೇಷ್ಠ ಗಾಯಕರನ್ನು ಈ ನಾಡು ಕಳೆದುಕೊಂಡು ತಬ್ಬಲಿಯಾಗಿದೆ ಕೊರೊನಾ ಸೋಂಕಿನಿಂದ ಬಳಲಿ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಅತೀವ ದುಃಖ ತಂದಿದೆ. ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ಅನುಗ್ರಹಿಸಲಿ. ಭಗವಂತ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.