ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam Terror Attack) ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು (Terrorist) ನಡೆಸಿದ ನರಮೇಧ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಾರತದಲ್ಲಾದ (India) ಭೀಕರ ಭಯೋತ್ಪಾದಕ ದಾಳಿಗಳ ಕರಾಳತೆಯನ್ನು ಮತ್ತೆ ನೆನಪಿಸುವಂತಹ ಹೇಯಕೃತ್ಯ ಇದಾಗಿದೆ. 26/11ರ ಮುಂಬೈ ದಾಳಿಯ ನಂತರ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿದೊಡ್ಡ ಭಯೋತ್ಪಾದಕ ಅಟ್ಯಾಕ್ ಇದು. ಹೆಂಡತಿ, ಮಕ್ಕಳು ಮತ್ತು ಕುಟುಂಬ ಸದಸ್ಯರ ಎದುರೇ ಸಂತ್ರಸ್ತರನ್ನು ಉಗ್ರರು ಕ್ರೂರವಾಗಿ ಗುಂಡಿಕ್ಕಿ ಕೊಂದರು. ತಮ್ಮವರನ್ನು ಕಳೆದುಕೊಂಡು ಕುಟುಂಬಸ್ಥರು ದುಃಖಿಸುತ್ತಿರುವುದು ನಿಜಕ್ಕೂ ಕರುಣಾಜನಕವಾಗಿದೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಸೌದಿ ಅರೇಬಿಯಾಕ್ಕೆ ಸಾಗರೋತ್ತರ ಪ್ರವಾಸಲ್ಲಿರುವ ಹೊತ್ತಲ್ಲೇ ನಡೆದ ಉಗ್ರ ದಾಳಿಗೆ 26 ಮಂದಿ ಅಸುನೀಗಿದರು. 17ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಕೃತ್ಯ ಇತಿಹಾಸದ ಕರಾಳತೆಯನ್ನು ಮತ್ತೆ ನೆನಪಿಸಿದಂತಿದೆ. ಅಷ್ಟಕ್ಕೂ ಹಿಂದೆಯಾದ ಆ ದಾಳಿ ಯಾವುದು? ಏನಾಗಿತ್ತು?
ಜಮ್ಮು-ಕಾಶ್ಮೀರಕ್ಕೆ ಪ್ರವಾಸಿಗರ ದಂಡು
ವಾಸ್ತವವಾಗಿ 2019ರ ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆದುಕೊಂಡ ನಂತರ ರಾಜ್ಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಾರಂಭಿಸಿದರು. ಪ್ರವಾಸೋದ್ಯಮವು ಸ್ಥಳೀಯ ಉದ್ಯೋಗ ಮತ್ತು ವ್ಯವಹಾರಗಳಿಗೆ ಉತ್ತೇಜನ ನೀಡಿತು. ರಾಜ್ಯಕ್ಕೆ ಸುಭದ್ರ ಆರ್ಥಿಕತೆಗೆ ಭದ್ರ ಬುನಾದಿಯಾಗುವ ಸೂಚನೆ ಸಿಕ್ಕಿತ್ತು. ಆದರೆ, ಪಹಲ್ಗಾಮ್ ದಾಳಿಯು ಉಗ್ರರ ಕ್ರೂರತ್ವವನ್ನು ಕಾಶ್ಮೀರದಲ್ಲಿ (Jammu Kashmir) ಪುನರುಜ್ಜೀವನಗೊಳಿಸುವಂತಿದೆ. ವಿದೇಶಿ ನಾಯಕರು ಮತ್ತು ಅಧಿಕಾರಿಗಳು ದೇಶದಲ್ಲಿದ್ದಾಗ, ನಾಗರಿಕರ ಮೇಲಿನ ಭಯೋತ್ಪಾದಕ ದಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸುವ ಉದ್ದೇಶದ್ದೇ ಎಂಬ ಪ್ರಶ್ನೆ ಮೂಡಿದೆ.
ದಾಳಿ ಬಗ್ಗೆ ಯುಎಸ್ ನಾಯಕರು ಹೇಳಿದ್ದೇನು?
ಅಮೆರಿಕವು ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ (India) ಬಲವಾಗಿ ನಿಂತಿದೆ. ಉಗ್ರರ ದಾಳಿಗೆ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಪ್ರಧಾನಿ ಮೋದಿ ಮತ್ತು ಭಾರತದ ಜನತೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಕಳವಳಕಾರಿ ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರತದ ಪಹಲ್ಗಾಮ್‌ನಲ್ಲಿ ನಡೆದ ವಿಧ್ವಂಸಕ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಉಷಾ ಮತ್ತು ನಾನು ಸಂತಾಪ ಸೂಚಿಸುತ್ತೇವೆ. ಈಚೆಗಷ್ಟೇ ನಾವು ಭಾರತದ ಸೌಂದರ್ಯ ಮತ್ತು ಜನರ ಪ್ರೀತಿಗೆ ಮಾರುಹೋಗಿದ್ದೆವು. ದೇಶದ ಜನತೆ ಪ್ರೀತಿಯೊಂದಿಗೆ ಹಿಂತಿರುಗಿದ್ದೆವು. ಆದರೆ, ಈಗ ಭೀಕರ ದಾಳಿಯಿಂದಾಗಿ ಅನೇಕರು ದುಃಖಿಸುವಂತಾಗಿದೆ. ನಾವು ಅವರೊಂದಿಗಿದ್ದೇವೆ ಎಂದು ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಂತಾಪ ಸೂಚಿಸಿದ್ದಾರೆ.
2000 ದಲ್ಲಿ ಏನಾಗಿತ್ತು?
2000, ಮಾರ್ಚ್ 20 ರ ರಾತ್ರಿ ಪಾಕಿಸ್ತಾನ ಪ್ರಯೋಜಿತ ಉಗ್ರಗಾಮಿಗಳಿಂದ ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಚಿಟ್ಟಿಂಗ್‌ಹೊರಾ ಗ್ರಾಮದಲ್ಲಿ 36 ಸಿಖ್ ಗ್ರಾಮಸ್ಥರ ಹತ್ಯಾಕಾಂಡ ನಡೆಯಿತು. ಆ ಸಂದರ್ಭದಲ್ಲೇ ಮಾ.21-25ರ ವರೆಗೆ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನವನ್ನು ಒಳಗೊಳ್ಳುವ ಬಗ್ಗೆ ಕ್ಲಿಂಟನ್ ಅವರ ಜೊತೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾತುಕತೆ ನಡೆಸಿದ್ದರು. ಆ ಸಮಯದಲ್ಲಿ ಕ್ಲಿಂಟನ್ ಜೈಪುರ ಮತ್ತು ಆಗ್ರಾ ಪ್ರವಾಸ ಮಾಡಿದ್ದರು.
2002ರಲ್ಲಿ ಮತ್ತೊಂದು ದಾಳಿ
ಎರಡು ವರ್ಷಗಳ ತರುವಾಯ, ದಕ್ಷಿಣ ಏಷ್ಯಾದ ವ್ಯವಹಾರಗಳ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಕ್ರಿಸ್ಟಿನಾ ಬಿ ರೊಕ್ಕಾ ಭಾರತಕ್ಕೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲೇ 2002ರ ಮೇ 14 ರಂದು ಕಲುಚಕ್ ಬಳಿ ಭಯೋತ್ಪಾದಕ ದಾಳಿ ನಡೆಯಿತು. ಮೂವರು ಉಗ್ರರು ಹಿಮಾಚಲ ರಸ್ತೆ ಸಾರಿಗೆ ನಿಯಮದ ಬಸ್ಸಿನಲ್ಲಿ ಮನಾಲಿಯಿಂದ ಜಮ್ಮುವಿಗೆ ಹೊರಟಿದ್ದವರ ಮೇಲೆ ದಾಳಿ ಮಾಡಿ 7 ಜನರನ್ನು ಕೊಂದರು. ಸಾಲದೆಂಬಂತೆ ಸೇನಾ ಸಿಬ್ಬಂದಿಗಳಿರುವ ಕ್ವಾಟ್ರಸ್‌ಗೆ ನುಗ್ಗಿ ನಿರ್ದಾಕ್ಷಿಣ್ಯವಾಗಿ ಗುಂಡಿನ ಮಳೆಗರೆದರು. ಈ ಕ್ರೂರ ಕೃತ್ಯಕ್ಕೆ 10 ಮಕ್ಕಳು, 8 ಮಹಿಳೆಯರು ಮತ್ತು ಐವರು ಸೇನಾ ಸಿಬ್ಬಂದಿ ಸೇರಿ 23 ಮಂದಿ ಬಲಿಯಾದರು. ಹತ್ಯೆಗೀಡಾದ ಮಕ್ಕಳು 4-10 ವರ್ಷದೊಳಗಿನವರಾಗಿದ್ದರು. ದಾಳಿಯಲ್ಲಿ 34 ಜನರು ಗಾಯಗೊಂಡಿದ್ದರು.
ಪಾಕ್ ಮುಖ್ಯಸ್ಥನ ಆ ಹೇಳಿಕೆ ಬೆನ್ನಲ್ಲೇ ದಾಳಿ!
ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು. ಅದನ್ನು ಪಾಕಿಸ್ತಾನಕ್ಕೆ ಸೇರಿಸುವ ಸಂಬಂಧ ವೀರೋಚಿತ ಹೋರಾಟ ನಡೆಸುತ್ತಿರುವ ನಮ್ಮ ಕಾಶ್ಮೀರಿ ಸಹೋದರರನ್ನು ನಾವು ಎಂದಿಗೂ ಕೈಬಿಡುವುದಿಲ್ಲ ಎಂದು ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಸೇನೆ ಮುಖ್ಯಸ್ಥ ಅಸೀಮ್ ಮುನೀರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಹಲ್ಗಾಮ್‌ನಲ್ಲಿ ಭೀಕರ ಉಗ್ರ ದಾಳಿ ನಡೆದಿದೆ. ಇದು ಕಾಶ್ಮೀರ ಬಗೆಗಿನ ಪಾಕ್ ನಿಲುವನ್ನು ಪ್ರತಿಬಿಂಬಿಸುವಂತಿದೆ.
ಭಾರತದ ಮಿನಿ ಸ್ವಿಜರ್ಲ್ಯಾಂಡ್ ‘ಪಹಲ್ಗಾಮ್’
ಪಹಲ್ಗಾಮ್ ಭಾರತದ ಮಿನಿ ಸ್ವಿಜರ್ಲ್ಯಾಂಡ್ ಇದ್ದಂತೆ. ಮೆಡೋಸ್ ಮತ್ತು ಮೊಘಲ್ ತೋಟಗಳು ವಸಂತಕಾಲಕ್ಕೆ ಸಾಕ್ಷಿಯಾಗಲು ಸಾವಿರಾರು ಜನರನ್ನು ಆಕರ್ಷಿಸುತ್ತಿವೆ. ಇದು ಹಲವು ಕಾರಣಗಳಿಗೆ ಮಹತ್ವದ್ದಾಗಿದೆ. ಅಮರನಾಥ ಗುಹೆಯ ಎರಡು ಮಾರ್ಗಗಳಲ್ಲಿ ಇದೂ ಒಂದು. ಇದರ ಮಾರ್ಗದ ಮುಖಾಂತರವೇ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳು ಹೊರಡಬೇಕು. ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಬೈಸರನ್ ಪೈನ್ ಅರಣ್ಯಕ್ಕೆ ನೆಲೆಯಾಗಿದೆ. ಜನಪ್ರಿಯ ಟ್ರೆಕ್ಕಿಂಗ್ ಮಾರ್ಗವೂ ಆಗಿದೆ.
ಜಮ್ಮು-ಕಾಶ್ಮೀರ ಪ್ರವಾಸೋದ್ಯಮಕ್ಕೆ ಕುತ್ತು
ಸ್ಥಳೀಯ ಉದ್ಯಮದಾರರು ಭಯೋತ್ಪಾದಕ ದಾಳಿಯಿಂದ ಕಂಗೆಟ್ಟಿದ್ದಾರೆ. ಇದು ನಿಜಕ್ಕೂ ರಾಜ್ಯಕ್ಕೆ ದೊಡ್ಡ ಹೊಡೆತ. ಶಾಂತಿಯುತ ಪರಿಸ್ಥಿತಿಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ವಲಯದಲ್ಲಿ ಬೆಳವಣಿಗೆ ಕಂಡಿತ್ತು. ಆದರೆ, ಈಗ ನಡೆದ ಉಗ್ರರ ದಾಳಿಯು ಕ್ಷಣಾರ್ಧದಲ್ಲಿ ಎಲ್ಲವನ್ನೂ ಮಣ್ಣುಪಾಲು ಮಾಡಿತು. ಪ್ರವಾಸಿಗರು ಭಯಭೀತರಾಗಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ ಎಂದು ಕಾಶ್ಮೀರದ ಟ್ರಾವೆಲ್ ಏನೆಂಟ್ಸ್ ಅಸೋಷಿಯೇಷನ್‌ನ ಅಧ್ಯಕ್ಷ ರೌಫ್ ಟ್ರಾಂಬೂ ಬೇಸರ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರವು ಪ್ರವಾಸಿ ಸ್ನೇಹಿ ತಾಣವಾಗಿ ಪ್ರಚಾರ ಮಾಡುವಲ್ಲಿ ಕೇಂದ್ರವು ಕ್ರಿಯಾಶೀಲವಾಗಿತ್ತು. 2023ರ ಮೇ ತಿಂಗಳಲ್ಲಿ ಶ್ರೀನಗರವು ಮೂರನೇ ಜಿ20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆ ಆಯೋಜಿಸಿತ್ತು. ಇಲ್ಲಿ ಚಲನಚಿತ್ರಗಳನ್ನು ಚಿತ್ರೀಕರಣ ಉತ್ತೇಜಿಸಲು ಚಲನಚಿತ್ರ ನೀತಿಯನ್ನು ಅಭಿವೃದ್ಧಿಪಡಿಸಲಾಯಿತು. 2024ರಲ್ಲೇ 2.3 ಕೋಟಿ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಾರ, 2018ರಲ್ಲಿ ಆರ್ಟಿಕಲ್ 370 ರದ್ದತಿಗೂ ಮುನ್ನ ಪ್ರವಾಸಿಗರ ಸಂಖ್ಯೆ 1.6 ಕೋಟಿ ಇತ್ತು. ಅದರಲ್ಲಿ 8.3 ಲಕ್ಷ ಮಂದಿ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು.