– 2 ಎಕೆರೆ ಬೀನ್ಸ್ ಬೆಳೆದು 20 ಲಕ್ಷ ಆದಾಯ ಗಳಿಕೆ
ಚಿಕ್ಕಬಳ್ಳಾಪುರ: ಬರದ ನಡುವೆಯೂ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಯುವ ರೈತ ಗಿರೀಶ್, ಬೀನ್ಸ್ (Beans) ಬೆಳೆ ಬೆಳೆದು ಬಂಪರ್ ಲಾಭ ಮಾಡಿ ಇದೀಗ ಸುದ್ದಿಯಾಗಿದ್ದಾರೆ.
ಹೌದು. ಇತ್ತೀಚೆಗೆ ರಾಜ್ಯ ಕಂಡ ಬಿಸಿಲಿನ ತಾಪಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲ, ರಾಜ್ಯದಲ್ಲಿ ಎಲ್ಲಿಯೂ ಹುರುಳಿಕಾಯಿ ಬೆಳೆಯಲು ಸಾಧ್ಯವಾಗಿಲ್ಲ. ರಣ ಬಿಸಿಲಿನ ತಾಪಮಾನಕ್ಕೆ ಹುರುಳಿಕಾಯಿ ಬೆಳೆ ಇಳುವರಿ ಬಂದಿಲ್ಲ. ಹಲವು ಕಡೆ ಬಿಸಿಲಿಗೆ ಹೂ ಬಾಡಿ ಉದುರಿ ಹೋಗಿದೆ. ಇದರಿಂದ ಹುರುಳಿಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಒಂದು ಕೆ.ಜಿ ಹುರುಳಿ ಬೆಲೆ ಇನ್ನೂರು ರೂಪಾಯಿಗೆ ಮಾರಾಟವಾಗುತ್ತಿದೆ. ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಯಲ್ಲಿ ಖರೀದಿ ಮಾಡೋಣ ಅಂದ್ರೂ ಸಾಕಾಗುವಷ್ಟು ಬೀನ್ಸ್ ಸಿಗುತ್ತಿಲ್ಲ. ಒಂದೋ ಎರಡು ಮೂಟೆ ಬೀನ್ಸ್ ಬಂದರೆ ಅದಕ್ಕಾಗಿ ವರ್ತಕರ ನಡುವೆ ಭಾರೀ ಪೈಪೋಟಿ ಬೀಳುತ್ತಿದೆ. ಇದನ್ನೂ ಓದಿ: ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಗಿರೀಶ್, ಡಿಗ್ರಿ ಮುಗಿಸಿ ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಬರುವ 15 ಸಾವಿರ ಸಂಬಳ ಸಾಕಾಗ್ತಾ ಇರಲಿಲ್ಲ. ಇದರಿಂದ ಕಂಪನಿ ಬಿಟ್ಟು ಊರಿಗೆ ಬಂದು ಇದ್ದ 8 ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಹುರುಳಿ ಬೀಜ ನಾಟಿ ಮಾಡಿದ್ದರು. ಕರೆಂಟ್ ಸಮಸ್ಯೆ ಇದ್ದರೂ ಜನರೇಟರ್ ಇಟ್ಟು ತೋಟಕ್ಕೆ ನೀರು ಹಾಯಿಸಿ ರಾತ್ರಿ ಹಗಲು ಕಷ್ಟ ಪಟ್ಟು ಬಂಪರ್ ಬೆಳೆ ಬೆಳೆದಿದ್ದಾರೆ.
ಇದೀಗ ತಾನು ಬೆಳೆದ ಬೆಳೆಗೆ ಬಂಗಾರದಂತಹ ಬೆಲೆ ಬಂದಿದ್ದು ಎರಡು ಟನ್ ಹುರಳಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ಗಳಿಸಿ ಬಂಪರ್ ಲಾಟರಿ ಹೊಡೆದಿದ್ದಾರೆ. ಬರದ ನಡುವೆಯೂ ಬೀನ್ಸ್ ಬೆಳೆದ ರೈತನಿಗೆ ಬಂಪರ್ ಲಾಭ ಬಂದಿದ್ದು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.