ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅನೇಕ ಜನಪರ ಕಾರ್ಯಕ್ರಮಕ್ಕೆ ಸರ್ಕಾರದ ಜೊತೆ ಕೈ ಜೋಡಿಸುತ್ತಾ ಬಂದಿದೆ. ಈಗ ಮೆಟ್ರೋ ಕಾಮಗಾರಿಗೆ ಕೂಡ ಸಹಾಯ ಮಾಡಲು ಮುಂದಾಗಿದೆ.
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಇಂದು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೋನಪ್ಪನ ಅಗ್ರಹಾರ ಮೆಟ್ರೋ ಕಾಮಗಾರಿಗೆ ಸಹಾಯ ಮಾಡುವ ಕುರಿತು ಚರ್ಚೆ ನಡೆಸಿದರು.
ಚರ್ಚೆಯ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕೋನಪ್ಪನ ಅಗ್ರಹಾರ ಮೆಟ್ರೋ ಹಳಿ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ನಿಲ್ದಾಣಕ್ಕೆ 100 ಕೋಟಿ ರೂ. ಸಹಾಯ ನೀಡುವುದಾಗಿ ಸುಧಾಮೂರ್ತಿ ಅವರು ತಿಳಿಸಿದ್ದಾರೆ. ಇದೇ ತಿಂಗಳ 19 ರಂದು ವಿಧಾನಸೌಧದಲ್ಲಿ ಸರ್ಕಾರ ಮತ್ತು ಇನ್ಫೋಸಿಸ್ ನಡುವೆ ತಿಳವಳಿಕೆಯ ಸ್ಮರಣಿಕೆ (ಎಂಓಯು) ಒಪ್ಪಂದ ನಡೆಯಲಿದೆ. ಇನ್ಫೋಸಿಸ್ ಸಂಸ್ಥೆ ಅನೇಕ ಒಳ್ಳೆ ಕೆಲಸ ಮಾಡ್ತಿದೆ. ಈ ಮೂಲಕ ಇನ್ಫೋಸಿಸ್ ಫೌಂಡೇಷನ್ ಇತರ ಕಂಪೆನಿಗಳಿಗೆ ಮಾದರಿ ಆಗಿದೆ ಎಂದು ಹೇಳಿದರು.
ಸಹಾಯದ ಬಗ್ಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪ್ರತಿಕ್ರಿಯಿಸಿ, ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅದಮನು. ಜನರಿಗೆ ಅನುಕೂಲವಾಗಲು ಈ ಸಹಾಯ ಮಾಡುತ್ತಿದ್ದೇವೆ. ನಮ್ಮಲ್ಲಿ ಇರುವುದನ್ನು ಇನ್ನೊಬ್ಬರಿಗೆ ನೀಡಿ ಸಹಾಯ ಮಾಡಬೇಕು. ಹೀಗಾಗಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಉತ್ತಮವಾಗಿ ನಿರ್ಮಾಣ ಮಾಡಿ, 30 ವರ್ಷ ನಾವೇ ನಿರ್ವಹಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ರು.