ಕೊಪ್ಪಳ: 200 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗವಿಸಿದ್ದೇಶ್ವರ ರಥೋತ್ಸವ ಬೆಳಗ್ಗೆ ನಡೆಯಿತು. ಇಂದು ಬೆಳಗ್ಗೆ 8.45 ಕ್ಕೆ ಗವಿಸಿದ್ದೇಶ್ವರ ರಥೋತ್ಸವ ಸಂಪನ್ನವಾಗಿದ್ದು, ಕೊರೊನಾ ಹಿನ್ನೆಲೆ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಸಲಾಯಿತು. ಅಲ್ಲದೆ ಈ ಬಾರಿ ಕೇವಲ ಮೂರು ದಿನಕ್ಕೆ ಜಾತ್ರೆಯನ್ನ ಸೀಮಿತ ಮಾಡಲಾಗಿದೆ.
ಕೊರೊನಾ ಗೆದ್ದ ಕುಷ್ಟಗಿ ತಾಲೂಕಿನ ಬಿಜಕಲ್ ನ ಶಿವಲಿಂಗ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ಬೀದಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕೆಲವು ಜನರು ಮಾತ್ರ ರಥೋತ್ಸವ ನೆರವೇರಿಸಿದರು. ಕೊರೊನಾ ಹಿನ್ನೆಲೆ ಜಿಲ್ಲಾಡಳಿತ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೂ ಸರಳವಾಗಿ ಜಾತ್ರೆ ಮಾಡಲಾಗಿದ್ದು, ಕೇವಲ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ.
200 ವರ್ಷಗಳಲ್ಲಿ ಇದೇ ಮೊದಲ ಬಾರಿ ಗವಿಸಿದ್ದೇಶ್ವರ ರಥೋತ್ಸವ ಬೆಳಗ್ಗೆ 8.45 ಕ್ಕೆ ನಡೆಯಿತು. ಪ್ರತಿ ವರ್ಷ ಸುಮಾರು ಐದರಿಂದ ಆರು ಲಕ್ಷ ಜನ ಗವಿ ಸಿದ್ದೇಶ್ವರ ಜಾತ್ರೆಗೆ ಸೇರತ್ತಿದ್ದರು. ಈ ಬಾರಿ ಒಂದು ಲಕ್ಷ ಜನ ರಥೋತ್ಸವಕ್ಕೆ ಬಂದಿದ್ದರು. ಆದರೂ ರಥೋತ್ಸವ ಬೀದಿ ಮಾತ್ರ ಖಾಲಿ ಖಾಲಿ ಕಾಣುತ್ತಿತ್ತು.
ಗವಿಮಠದ ಜಾತ್ರೆ ಕೇವಲ ಜಾತ್ರೆಯಾಗದೆ, ಪ್ರತಿ ವರ್ಷ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಈ ಬಾರಿ ಮೂರೇ ದಿನಕ್ಕೆ ಜಾತ್ರೆ ಸೀಮಿತವಾಗಿದೆ. ಯಾವುದೇ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ಇರಲಿಲ್ಲ. ಸರಳವಾಗಿ ಜಾತ್ರೆ ಆಚರಿಸಲಾಗಿದೆ. ಆದರೆ ಗವಿಮಠ ಹೊಸದೊಂದು ಸಂಕಲ್ಪ ಮಾಡಿದ್ದು, ವಿದ್ಯಾರ್ಥಿಗಳಿಗಾಗಿ 24 ಗಂಟೆ ಗ್ರಂಥಾಲಯ ಆರಂಭಿಸಿದೆ. ಜೊತೆಗೆ ಕೊಪ್ಪಳ ತಾಲೂಕಿನ ಗಿಣಗೇರಿ ಕೆರೆಯ ಸ್ವಚ್ಚತಾ ಸಂಕಲ್ಪ ಮಾಡಿದೆ. ಒಂದು ಗ್ರಾಮವನ್ನು ದತ್ತು ಸ್ವೀಕಾರ ಮಾಡಿ ಮಾದರಿ ಗ್ರಾಮ ಮಾಡಲು ಗವಿ ಮಠ ಮುಂದಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರು ವಾಸಿಯಾದ ಗವಿಮಠ ಜಾತ್ರೆ, ಪ್ರತಿ ವರ್ಷ ಸಾಮಾಜಿಕ ಕಳಕಳಿಯಿಂದ ನಾಡಿನಾದ್ಯಂತ ಹೆಸರು ಗಳಿಸಿದೆ. ಇದೀಗ ಹೊಸ ಆಲೋಚನೆಯನ್ನು ಜಾತ್ರೆಯ ದಿನ ಗವಿಮಠದ ಪೀಠಾಧಿಪತಿಗಳು ಸಂಕಲ್ಪ ಮಾಡಿದ್ದಾರೆ. ಇಂದು ನಡೆದ ಗವಿಮಠದ ಜಾತ್ರೆಯಲ್ಲಿ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ದಂಪತಿ ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳು ಭಾಗಿಯಾಗಿದ್ದರು. ಜನ ದೂರದಿಂದಲೇ ನಿಂತು ರಥೋತ್ಸವಕ್ಕೆ ಹೂ, ಹಣ್ಣು ಎಸೆದು ಭಕ್ತಿ, ಭಾವ ಮೆರೆದರು.