– ಇಂದು ಮಠದ ಮುಖ್ಯ ದ್ವಾರ ತೆರೆದ ಆಡಳಿತ ಮಂಡಳಿ
ರಾಯಚೂರು: ಕೊರೊನಾ ಭೀತಿ ಹಿನ್ನೆಲೆ ಭಕ್ತರಿಗೆ ರಾಯರ ವೃಂದಾವನ ದರ್ಶನ ಭಾಗ್ಯ ಸ್ಥಗಿತಗೊಳಿಸಿದ್ದ ಮಂತ್ರಾಲಯ ಮಠ ಇಂದಿನಿಂದ ಭಕ್ತರಿಗಾಗಿ ಮುಕ್ತ ಅವಕಾಶ ಕಲ್ಪಿಸಿದೆ.
ಈ ಮೂಲಕ ಬರೋಬ್ಬರಿ 200 ದಿನಗಳ ನಂತರ ರಾಯರ ಮಠದಲ್ಲಿ ಭಕ್ತರಿಗೆ ಓಡಾಡಲು ಅವಕಾಶ ಕಲ್ಪಿಸಲಾಗಿದ್ದು, ಮಠದ ಮುಖ್ಯ ದ್ವಾರವನ್ನು ಇಂದು ತೆರೆಯಲಾಗಿದೆ. ಮಾರ್ಚ್ 21 ರಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಮಠವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಠದಲ್ಲಿ ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಠದ ಆಡಳಿತ ಮಂಡಳಿ ಸೂಚಿಸಿದೆ.
ಇಂದು ಭಕ್ತರಿಗೆ ದರ್ಶನದ ಅವಕಾಶ ನೀಡಿದ ಹಿನ್ನೆಲೆ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು. ಮಠದ ಪ್ರಾಂಗಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ರಾಯರ ಭಕ್ತರು ಸಂತಸಗೊಂಡಿದ್ದಾರೆ. ದರ್ಶನ ಪಡೆದು ಕೆಲಹೊತ್ತು ಮಠದಲ್ಲಿ ಕಾಲ ಕಳೆದು ಮರಳುತ್ತಿದ್ದಾರೆ.