ಚಿಕ್ಕಬಳ್ಳಾಪುರ: 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ಕಾಮುಕ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 14,000 ರೂಪಾಯಿ ದಂಡ ವಿಧಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಹನುಂತಪ್ಪ ಕೋರೆಡ್ಡಿಯವರು ಈ ಮಹತ್ವದ ಆದೇಶ ನೀಡಿದ್ದಾರೆ.
ಘಟನೆಯ ವಿವರ:
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಿ 62 ವರ್ಷದ ಗಂಗಾಧರಪ್ಪ ಶಾಲೆಗೆ ಹೋಗಿ ಮನೆಗೆ ಬರುತ್ತಿದ್ದ ಬಾಲಕಿಗೆ ಚಾಕ್ಲೇಟ್ ಕೊಟ್ಟಿದ್ದಾನೆ. ತದನಂತರ ತುಳಿಯಲು ಸೈಕಲ್ ಕೊಡುಸುವುದಾಗಿ ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ಈತನ ನಡುವಳಿಕೆ ಬಗ್ಗೆ ಸಂಶಯ ಕಂಡು ಸ್ಥಳೀಯರು ಮನೆಗೆ ನುಗ್ಗಿ ನೋಡಿದಾಗ ಬಾಲಕಿ ಮನೆಯಲ್ಲಿರುವುದು ಪತ್ತೆಯಾಗಿದೆ. ಹೀಗಾಗಿ ಗಂಗಾಧರಪ್ಪನಿಗೆ ಹಿಗ್ಗಮುಗ್ಗಾ ಥಳಿಸಿ ಸ್ಥಳೀಯರು ಮಂಚೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
10 ದಿನದಲ್ಲಿ ಚಾರ್ಜ್ ಶೀಟ್..!
ನವೆಂಬರ್ 19 ರಂದು ಬೆಳಕಿಗೆ ಬಂದ ಪ್ರಕರಣವನ್ನ ಪೋಕ್ಸೋ ಕಾಯ್ದೆ ಸೇರಿದಂತೆ ಇನ್ನಿತರೆ ಸೆಕ್ಷನ್ ಗಳಡಿ ಕೇಸ್ ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ ಪೊಲೀಸರು 10 ದಿನಗಳಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ ನಲ್ಲಿ ವಾದ ಪ್ರತಿವಾದ ಆಲಿಸಿ ಕೇವಲ 16 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ಪ್ರಕಟ ಮಾಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv