ಹೈದರಾಬಾದ್: 20 ವರ್ಷದ ಯುವತಿಯೊಬ್ಬಳು ತನ್ನ ಅಜ್ಜಿ ಬೈದಳು ಎಂದು ಹಂದ್ರಿ-ನೀವಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯ ಮಡ್ಡಿಕೇರಾ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಅನಂತಪುರ ಜಿಲ್ಲೆಯ ಗುಂಟಕಲ್ ಪಟ್ಟಣದ ಭೀಮಾಲಿಂಗ ಅವರ ಮಗಳು ಝಾನ್ಸಿ ಎಂದು ಗುರುತಿಸಲಾಗಿದೆ. ಝಾನ್ಸಿ ಕಳೆದ ಕೆಲವು ತಿಂಗಳುಗಳಿಂದ ಕರ್ನೂಲ್ ಜಿಲ್ಲೆಯಲ್ಲಿರುವ ಮಡ್ಡಿಕೇರಾದಲ್ಲಿರುವ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಇತ್ತೀಚೆಗೆ ಅಜ್ಜಿ ಈಶ್ವರಮ್ಮ ಝಾನ್ಸಿ ಫೋನಿನಲ್ಲಿ ಗಂಟೆಗಳವರೆಗೆ ಮಾತನಾಡುತ್ತಿದ್ದೀಯಾ ಎಂದು ಬೈದಿದ್ದಾರೆ. ಇದರಿಂದ ಝಾನ್ಸಿ ಖಿನ್ನತೆಗೆ ಒಳಗಾಗಿದ್ದು, ತನ್ನ ಅಜ್ಜಿ ಬೈದ್ರು ಎಂದು ಗುಂಟಕಲ್ ನಲ್ಲಿರುವ ತನ್ನ ಪೋಷಕರ ಮನೆಗೆ ಹೋಗುತ್ತೇನೆ ಎಂದು ಹೇಳಿ ಫೆಬ್ರವರಿ 12 ರಂದು ಮನೆಯಿಂದ ಹೊರಟಿದ್ದಾಳೆ.
ಝಾನ್ಸಿ ಪೋಷಕರ ಮನೆಗೆ ಹೋಗದೇ ಹಂದ್ರಿ-ನೀವಾ ಕಾಲುವೆ ಸಮೀಪವಿರುವ ಗ್ರಾಮದ ಹೊರವಲಯಕ್ಕೆ ಹೋಗಿದ್ದು, ನಂತರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಝಾನ್ಸಿ ನಮ್ಮ ಮನೆಗೂ ಬಂದಿಲ್ಲ ಎಂದು ತಿಳಿಸಿದ ನಂತರ ಅಜ್ಜಿ ಈಶ್ವರಮ್ಮ ಫೆಬ್ರವರಿ 15 ರಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
ಪೊಲೀಸರು ದೂರನ್ನು ದಾಖಲಿಸಿಕೊಂಡು ಕಾಣೆಯಾಗಿದ್ದ ಝಾನ್ಸಿ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಶುಕ್ರವಾರ ಅನಂತಪುರ ಜಿಲ್ಲೆಯ ವಜ್ರಕಾರುರ್ ಗ್ರಾಮದಲ್ಲಿ ಅಪರಿಚಿತ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ನಂತರ ಪ್ರಕರಣವನ್ನು ದಾಖಲಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.