ಜೋಧ್‍ಪುರ: ಮರ ಕತ್ತರಿಸಲು ವಿರೋಧ ವ್ಯಕ್ತಪಡಿಸಿದ್ದಕ್ಕೆ 20 ವರ್ಷದ ಯುವತಿಯೊಬ್ಬಳನ್ನು ಸಜೀವವಾಗಿ ದಹಿಸಿರುವ ಘಟನೆ ರಾಜಸ್ಥಾನದ ಜೋಧ್‍ಪುರ್‍ನ ಗ್ರಾಮವೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ರೆವೆನ್ಯೂ ಅಧಿಕಾರಿ ಸೇರಿದಂತೆ 10 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮೃತ ಯುವತಿಯನ್ನು ಲಲಿತಾ ಎಂದು ಗುರುತಿಸಲಾಗಿದೆ. ಜೋಧಪುರ್‍ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಬಳಿ ರಸ್ತೆ ನಿರ್ಮಾಣಕ್ಕಾಗಿ ತನ್ನ ಜಮೀನಿನಲ್ಲಿ ಮರಗಳನ್ನು ಕಡಿಯೋದನ್ನ ಯುವತಿ ವಿರೋಧಿಸಿದ್ದಳು. ಇದರಿಂದ ಕೆಲವು ಗ್ರಾಮಸ್ಥರು ಆಕೆಯ ಮೇಲೆ ದಾಳಿ ಮಾಡಿದ್ದು, ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಿಗ್ಗೆ ಲಲಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ರಸ್ತೆ ನಿರ್ಮಾಣದ ವಿಚಾರವಾಗಿ ಗಲಾಟೆಯಾಗಿತ್ತು. ನನ್ನ ಸಹೋದರಿ ಅದನ್ನು ವಿರೋಧಿಸಿದ್ದಳು. ಅವರು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು ಎಂದು ಯುವತಿಯ ಸಹೋದರ ವಿದ್ಯಾಧರ್ ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Advertisement
ಗ್ರಾಮದ ಮುಖ್ಯಸ್ಥ ರಣವೀರ್ ಸಿಂಗ್ ಹಾಗೂ ರೆವೆನ್ಯೂ ಅಧಿಕಾರಿ ಓಂ ಪ್ರಕಾಶ್ ಸೇರಿದಂತೆ ಇನ್ನೂ ಕೆಲವರು ಸೇರಿ ಯುವತಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಈ ಸಂಬಂಧ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ರಾಷ್ಟ್ರೀಯ ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಮದ ಮುಖ್ಯಸ್ಥ ಹಾಗೂ ಇತತರು ಸೇರಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯಕ್ಕೆ ಯುವತಿಯ ಮೃತದೇಹ ಶವಾಗಾರದಲ್ಲಿದೆ. ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.