– ಕಳ್ಳತನಕ್ಕೆಂದೇ ನೇಮಕ ಮಾಡಿಕೊಂಡಿದ್ದ ಮಾಲೀಕ
ತುಮಕೂರು: ನಾವು ಸಂಬಳಕ್ಕೆ ಕೆಲಸ ಮಾಡುವ ಶಿಕ್ಷಕ, ವೈದ್ಯ, ಎಂಜಿನಿಯರ್ ಈ ರೀತಿಯ ವೃತ್ತಿಗಳನ್ನ ಕೇಳಿರ್ತೀವಿ, ಕಂಪನಿಗಳು ಸಂಬಳಕ್ಕೆ ಸಿಬ್ಬಂದಿ ಅನ್ನು ನೇಮಕ ಮಾಡುತ್ತವೆ ಎಂದು ನೋಡ್ತೀರ್ತಿವಿ. ಆದರೆ ತುಮಕೂರಿನಲ್ಲಿ (Tumakuru) ಕಳ್ಳತನಕ್ಕೆಂದೇ ಸಂಬಳಕ್ಕೆ ನೇಮಕ ಮಾಡಿಕೊಂಡ ಅಪರೂಪದ ಕೆಲಸವೊಂದನ್ನು ಪತ್ತೆ ಹಚ್ಚಿದ್ದಾರೆ.
ಇಂತಹ ಅಪರೂಪದ ಪ್ರಕರಣ ನೋಡಿ ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಬೆಂಗಳೂರು ಮೂಲದ ರಾಘವೇಂದ್ರ ಎಂಬಾತ ವೆಂಕಟೇಶ್ ಎಂಬಾತನನ್ನ ಕಳ್ಳತನಕ್ಕಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ವೆಂಕಟೇಶನಿಗೆ 20 ಸಾವಿರ ರೂ. ಸಂಬಳ ಕೂಡ ಫಿಕ್ಸ್ ಮಾಡಿದ್ದಾನೆ. 20 ಸಾವಿರ ಸಂಬಳ ಪಡೆದ ಮೇಲೆ ಸುಮ್ನೆ ಕುಳಿತ್ತುಕೊಳ್ಳೊಕ್ಕೆ ಆಗುತ್ತಾ?. ಅದಕ್ಕೆ ಕಳ್ಳ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ರಾತ್ರಿ ಹೊತ್ತು ಕೊಳವೆ ಬಾವಿಯಲ್ಲಿದ್ದ ವೈರ್ ಗಳನ್ನ ಕದ್ದು ರಾಘವೇಂದ್ರನಿಗೆ ಕೊಡ್ತಿದ್ನಂತೆ. ಈ ಕದ್ದ ಕೇಬಲ್ ವೈರ್ ಗಳನ್ನ ರಾಘವೇಂದ್ರನು ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡ್ತಿದ್ನಂತೆ. ಸರಣಿ ಕಳ್ಳತನದ ಮೇಲೆ ಕಣ್ಣಿಟ್ಟು ಕಾದು ಕುಳಿತಿದ್ದ ಪೊಲೀಸರಿಗೆ ವಡ್ಡಗೆರೆಯಲ್ಲಿ ಈ ಐನಾತಿ ಖದೀಮರು ತೋರಿದ ಕಳ್ಳತನದ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೇ ಆಧಾರವಾಗಿ ಇಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ವೆಂಕಟೇಶ್, ರಾಘವೇಂದ್ರ, ವಿನೇಶ್ ಪಟೇಲ್‍ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯಲ್ಲಿ ಸಂಬಳ ಪಡೆದು ಕಳ್ಳತನ ಮಾಡುತ್ತಿರುವ ವಿಚಾರವನ್ನ ವೆಂಕಟೇಶ್ ಬಾಯ್ಬಿಟ್ಟಿದ್ದಾನೆ. ಕೊರಟಗೆರೆ ಪೊಲೀಸರು ಈ ಮೂವರನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿಸುವಂತೆ ಪತ್ನಿ, ಪುತ್ರನಿಗೆ 2 ದಿನ ಗೃಹ ಬಂಧನ- ಮನನೊಂದು ರೈತ ಆತ್ಮಹತ್ಯೆ
ಒಟ್ಟಾರೆ ವಿಚಿತ್ರ ಮತ್ತು ಅಪರೂಪದ ಪ್ರಕರಣಕ್ಕೆ ಕೊರಟಗೆರೆ ಠಾಣೆ ಸಾಕ್ಷಿಯಾಗಿದೆ. ಗೃಹ ಸಚಿವರ ತವರು ಕ್ಷೇತ್ರದಲ್ಲೇ ಈ ಪ್ರಕರಣ ಬಯಲಿಗೆ ಬಂದಿರೋದು ಇನ್ನಷ್ಟು ಕುತೂಹಲ ಕೆರಳಿಸಿದೆ.