ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

Public TV
1 Min Read
KERALA HEAVY RAIN

ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪೆರಿಯಾರ್ ನದಿಯು 2013ರ ನಂತರ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ಮಾಹಿತಿಗಳ ಪ್ರಕಾರ ಇಡುಕ್ಕಿ ಜಿಲ್ಲೆಯ 11 ಮಂದಿ, ಮಲಪ್ಪುರಂನ 6 ಮಂದಿ, ಕೋಜಿಕೋಡು 2 ಹಾಗೂ ವಯನಾಡ್ ಜಿಲ್ಲೆಯಲ್ಲಿ 1 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಪಲಕ್ಕಾಡ್, ವಯನಾಡ್ ಹಾಗೂ ಕೋಜಿಕೋಡು ಜಿಲ್ಲೆಗಳಲ್ಲಿ 7 ಮಂದಿ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.

KERALA HEAVY RAIN 2

ನಾಪತ್ತೆಯಾದವರ ಶೋಧಕ್ಕೆ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ  ನಡೆಸುತ್ತಿದೆ. ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನಾ ಹಾಗೂ ಎನ್.ಡಿ.ಆರ್.ಎಫ್ ಮೊರೆಹೋಗಿದ್ದು, ಸಾಕಷ್ಟು ರಕ್ಷಣಾ ತಂಡಗಳು ಈಗಾಗಲೇ ಕಾರ್ಯಚರಣೆ ನಡೆಸುತ್ತಿವೆ.

ಇಡುಕ್ಕಿ ಡ್ಯಾಂ ನಿಂದ ನೀರನ್ನು ಹೊರಬಿಟ್ಟ ಪರಿಣಾಮ ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ನೀರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೂ ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿಯಿಂದ ತೆರಳಬೇಕಿದ್ದ ಹಾಗೂ ಆಗಮಿಸುವ ವಿಮಾನಗಳನ್ನು ಮಾರ್ಗಮಧ್ಯೆ ಬದಲಾವಣೆಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸುರಿಯುತ್ತಿರುವ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇಂದಿನಿಂದ ಎರ್ನಾಕುಲಂನ ಇಡಮಳಯಾರ್ ಜಲಾಶಯ ಹಾಗೂ ಕೋಜಿಕೋಡುವಿನ ಕಕ್ಕಾಯಂ ಜಲಾಶಯಗಳ ನೀರನ್ನು ಹೊರಬಿಡಲಾಗಿದೆ.

ರಾಜ್ಯದ ಒಟ್ಟು 22 ಜಲಾಶಯಗಳು ತುಂಬಿದ್ದರ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ಪ್ರಮಾಣದ ನೀರನ್ನು ನೀರನ್ನು ಹೊರಬಿಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಇಡುಕ್ಕಿ ಜಲಾಶಯವು ಬರೊಬ್ಬರಿ 26 ವರ್ಷಗಳ ಬಳಿಕ ತುಂಬಿದ್ದರ ಪರಿಣಾಮ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗಿದೆ.

ಕೇರಳ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಯ ಶಾಲಾ-ಕಾಲೇಜುಗಳಿ ರಜೆ ಘೋಷಿಸಿದೆ. ಅಲ್ಲದೇ ಅಲಪುಜಾದಲ್ಲಿ ನಡೆಯಲಿರುವ ಪ್ರಸಿದ್ಧ ದೋಣಿ ಸ್ಪರ್ಧೆಯನ್ನು ಸಹ ಮುಂದೂಡಲಾಗಿದೆ.

https://twitter.com/pranavkichu10/status/1027470911111229440

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *