ಬೆಂಗಳೂರು: ಮಳೆ ಹಾನಿಯಿಂದ ತೊಂದರೆಗೆ ಒಳಗಾಗಿರುವ ಕೊಡಗು ಜಿಲ್ಲೆಗೆ 20 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗಾಗಿ ಸರ್ಕಾರ 20 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರಕಾರ ಕೊಡಗು ಜಿಲ್ಲೆಯ ಬಗ್ಗೆ ತಾರತಮ್ಯ ಮಾಡುತ್ತಿದೆ. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ನಾನು ಕಳೆದ ನಾಲ್ಕು ವರ್ಷಗಳಿಂದ ಕೇಳುತ್ತಿದ್ದರೂ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರಕಾರ ರಾಜ್ಯಕ್ಕೆ ಹಿಂದೆಂದಿಗಿಂತಲೂ ಅಧಿಕ ಅನುದಾನ ನೀಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಲೋಕಸಭೆಯಲ್ಲಿ ರಾಜ್ಯ ಸರ್ಕಾರವನ್ನು ಈ ಹಿಂದೆ ದೂರಿದ್ದರು.
Advertisement
ಕಾವೇರಿ ನದಿ ಹುಟ್ಟುವುದು ನನ್ನ ಕ್ಷೇತ್ರದಲ್ಲಿ. ಈ ಬಾರಿ ಕೊಡಗು, ಕರಾವಳಿ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ತಮಿಳುನಾಡು-ಕರ್ನಾಟಕ ನಡುವಿನ ನೀರಾವರಿ ಸಮಸ್ಯೆಗೆ ವಿರಾಮ ಬಿದ್ದಿದೆ. ಉತ್ತಮ ಮಳೆಯಿಂದ ಕ್ಷೇತ್ರದ 4 ಡ್ಯಾಂ ಗಳು ತುಂಬಿದ್ದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗುತ್ತಿದೆ. ಎಷ್ಟೇ ಮಳೆಯಾದರೂ ಕ್ಷೇತ್ರದ ಜನರು ಅದನ್ನು ಸ್ವಾಗತಿಸುತ್ತಾರೆ. ಆದರೆ ಭಾರೀ ಮಳೆಯಿಂದ ಈ ಭಾಗದ ಜನರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ರಸ್ತೆಗಳು ಹಾಳಾಗಿದೆ. ನೂರಾರು ಮನೆಗಳು ಕುಸಿದಿದೆ. ಇಂಥ ಸ್ಥಿತಿ ಇದ್ದರೂ ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದರು.
Advertisement
ಇದಕ್ಕೂ ಮೊದಲು ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಫತಹ್ ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದ. ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಬಾಲಕ ಕಿಡಿಕಾರಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟೀಕೆಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಈಗ ಕೊಡಗಿಗೆ 20 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.