– 16ನೇ ವಯಸ್ಸಿನಲ್ಲಿ ಮನೆ ತೊರೆದಿದ್ದ ಮಗ
ಹಾಸನ: ಮಹಾಮಾರಿ ಕೊರೊನಾ ನಾನಾ ರೀತಿಯ ನಷ್ಟ ತಂದೊಡ್ಡಿರುವುದರ ಜೊತೆಗೆ ಅದೆಷ್ಟೋ ಮಂದಿಯನ್ನು ಕುಟುಂಬ ಸದಸ್ಯರಿಂದ ಶಾಶ್ವತವಾಗಿ ದೂರ ಮಾಡಿ ಕಣ್ಣೀರಿಗೆ ಕಾರಣವಾಗಿದೆ. ಆದರೆ ಇದೇ ವೈರಸ್ ಕಳೆದ 20 ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದವರನ್ನು ಮತ್ತೆ ಮನೆಗೆ ಬರುವಂತೆ ಮಾಡಿದ್ದು, ಕುಟುಂಬ ಸದಸ್ಯರಲ್ಲಿ ಸಂತಸ, ಹಿಗ್ಗು ಮರಳುವಂತೆ ಮಾಡಿದೆ.
ಹಾಸನದ ಹೊಂಗೆರೆ ಗ್ರಾಮದ ರಾಜೇಗೌಡ-ಅಕ್ಕಯ್ಯಮ್ಮ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಶೇಖರ್. ಒಬ್ಬನೇ ಮಗ ಎಂದು ಅಕ್ಕರೆಯಿಂದ ಸಾಕಿ ಸಲಹಿದ್ದರು. ಶೇಖರ್ ನಿಗೆ ಏನಾಯಿತೋ ಏನೋ, 16 ವಯಸ್ಸಿನಲ್ಲಿ ಮನೆಯಿಂದ ದಿಢೀರ್ ಕಾಣೆಯಾದ. ಮಗನಿಗಾಗಿ ಹೆತ್ತವರು, ಸಂಬಂಧಿಕರು ಹುಡುಕದ ಜಾಗ, ವಿಚಾರಿಸದ ಜನ ಇಲ್ಲ. ಎಲ್ಲಿ ತಡಕಾಡಿದರೂ, ಶೇಖರ್ ಸುಳಿವೇ ಸಿಗಲಿಲ್ಲ. ಪುತ್ರಶೋಖಂ ನಿರಂತರಂ ಅನ್ನೋ ಹಾಗೆ, ಒಬ್ಬನೇ ಮಗ ತಮ್ಮಿಂದ ಇಲ್ಲವಾಗಿದ್ದನ್ನು ನೆನೆದು ಹೆತ್ತವರು ನಿತ್ಯವೂ ಕಣ್ಣೀರಿಡುತ್ತಿದ್ದರು. ಹೋದ ಮಗ ಬಂದರೆ ಸಾಕು ಎಂದು ಕಂಡ ಕಂಡ ದೇವರಿಗೆ ಕೈ ಮುಗಿದರು. ಹರಕೆ ಕಟ್ಟಿಕೊಟ್ಟರು. ಇಷ್ಟಾದರೂ ಶೇಖರ್ ಕಾಣಸಿಗಲೇ ಇಲ್ಲ.
ಮಗನಿಗಾಗಿ ಕಾದು ಕಾದು ಹೈರಾಣಾದರೂ, ಆತ ಮರಳಿ ಬರದೇ ಇದ್ದಾಗ, ಸ್ಥಳೀಯರು ಮತ್ತು ಸಂಬಂಧಿಕರು ಶೇಖರ್ ಬಹುಶಃ ಸತ್ತು ಹೋಗಿದ್ದಾನೆ. ಒಂದು ವೇಳೆ ಆತ ಬದುಕಿದ್ದರೆ ಎಲ್ಲೇ ಇದ್ದರೂ ಇಷ್ಟೊತ್ತಿಗೆ ಊರಿಗೆ ಬರುತ್ತಿದ್ದ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ಶೇಖರ್ ಚಿಕ್ಕಪ್ಪ ತೀರಿಕೊಂಡರು, ಒಬ್ಬಳೇ ತಂಗಿಯ ಮದುವೆ ಇತ್ತೀಚಿಗೆ ನೆರವೇರಿತು. ಅದಕ್ಕೂ ಶೇಖರ್ ಆಗಮನ ಆಗಲಿಲ್ಲ. ಆತನನ್ನು ಕರೆಯೋಣ ಎಂದರೆ, ಎಲ್ಲಿದ್ದಾನೆ ಎಂಬ ಸುಳಿವಾಗಲೀ, ಫೋನ್ ಸಂಪರ್ಕವಾಗಲೀ ಮೊದಲೇ ಇರಲಿಲ್ಲ. ಹೀಗಾಗಿ ಪುತ್ರಭಾಗ್ಯ ನಮ್ಮ ಪಾಲಿಗೆ ಸಿಕ್ಕಿದ್ದೇ ಇಷ್ಟು ಎಂದುಕೊಂಡು ಹೆತ್ತವರು ಸುಮ್ಮನಾಗಿದ್ದರು.
ಎಲ್ಲೋ ಇದ್ದ ಶೇಖರ್, ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಿಢೀರ್ ಮನೆಗೆ ಬಂದಿದ್ದಾನೆ. 22 ವರ್ಷಗಳಿಂದ ಕಣ್ಮರೆಯಾಗಿದ್ದ ಮಗ ಒಮ್ಮೆಗೇ ಕಣ್ಣೆದುರು ಕಾಣಿಸಿಕೊಂಡಿದ್ದು ಹೆತ್ತವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ನಮ್ಮ ಪಾಲಿಗೆ ಮಗ ನೆನಪು ಎಂದುಕೊಂಡಿದ್ದವರು ಈಗ ಸಂತಸದ ಅಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಊರಿನವರೂ ಸಂತೋಷಗೊಂಡಿದ್ದಾರೆ. ಶೇಖರ್ ಮನೆ ಬಿಟ್ಟು ಹೋದಾಗ ತಂದೆ-ತಾಯಿ ವಯಸ್ಸಿನ್ನೂ 40 ದಾಟಿತ್ತು. ಈಗ ಇಬ್ಬರೂ 60 ವರ್ಷ ಮೀರಿದ್ದಾರೆ. ಇಳಿವಯಸ್ಸಿನಲ್ಲಾದರೂ ಮಗ ಬಂದನಲ್ಲಾ ಅಷ್ಟೇ ಸಾಕು ಎಂಬುದು ಹೆತ್ತವರ ನಿರುಮ್ಮಳ ನುಡಿಯಾಗಿದೆ.
ಮನೆ ಬಿಟ್ಟು ಹೋದ ಶೇಖರ್, ಜೀವನೋಪಾಯಕ್ಕಾಗಿ ಮುಂಬೈ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಅಲೆದಾಡಿದ್ದಾನೆ. ದೊಡ್ಡವನಾದ ನಂತರ ತನ್ನದೇ ಬ್ಯುಸಿನೆಸ್ ಸಹ ಆರಂಭಿಸಿದ್ದಾನೆ. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಕೈ ಹಾಕಿದ್ದ ವ್ಯಾಪಾರ ನಷ್ಟವಾಗಿದೆ. ಅನೇಕ ಸಲ ಊರಿಗೆ ಬರುವ ಮನಸ್ಸಾಗಿತ್ತು. ಆದರೆ ಈವರೆಗೂ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಹಾಸನಕ್ಕೂ ಬಂದಿದ್ದೆ. ಆದರೆ ನನ್ನ ಕಷ್ಟವನ್ನು ಮನೆಯವರ ಜೊತೆ ಹಂಚಿಕೊಳ್ಳಲು ಹಿಂಜರಿಕೆಯಾಯಿತು. ಇದೇ ಬೇಸರದಿಂದ ವಾಪಸ್ ಹೋದೆ. 2ನೇ ಬಾರಿಗೆ ಲಾಕ್‍ಡೌನ್ ಆದಾಗ ಜೀವನ ನಡೆಸುವುದು ಕಷ್ಟವಾಯಿತು. ಕಡೆಗೆ ನಮ್ಮೂರೇ ನನಗೆ ಮೇಲು ಎಂದು ತಿಳಿದು ಮರಳಿ ಬಂದೆ ಎಂದು ಶೇಖರ್ ಹೇಳುತ್ತಾನೆ.
ಕೊರೊನ ರಣಕೇಕೆಗೆ ಜನಜೀವನ ತತ್ತರಿಸಿ ಹೋಗಿದ್ದರೆ, ಹೊಟ್ಟೆಪಾಡಿಗಾಗಿ ಊರು ತೊರೆದಿದ್ದವರು ಪುನಃ ಹಿಂದಿರುಗುತ್ತಿದ್ದಾರೆ. ಆದರೆ 20 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಮಗ ಕೊರೊನದಿಂದಾಗಿ ಮನೆಗೆ ವಾಪಾಸ್ ಆಗಿರುವುದು ಹೆತ್ತವರನ್ನು ಹಿರಿ ಹಿರಿ ಹಿಗ್ಗಿಸಿದೆ.