– ಸರ್ಕಾರಕ್ಕೆ ಸ್ಥಳೀಯರು ಹಿಡಿಶಾಪ
– ಅನ್ನಪೂರ್ಣೇಶ್ವರಿ ಬಳಿ ಬೇಡಿಕೊಂಡ ಜನ
ಚಿಕ್ಕಮಗಳೂರು: ಈ ಮಳೆಗಾಲ ಮುಗಿದ ತಕ್ಷಣ ಅದಕ್ಕೊಂದು ಶಾಶ್ವತ ಪರಿಹಾರ ಮಾಡ್ತೀವಿ ಅಂತ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಆದರೂ ಸಮಸ್ಯೆಗೆ ಮಾತ್ರ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೆ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಬೆಂದು ಬೆಂಡಾಗಿರೋ ಜನಸಾಮಾನ್ಯರು ಸರ್ಕಾರದ ವಿರುದ್ಧ ಇಡಿ ಶಾಪ ಹಾಕ್ತಿದ್ದಾರೆ.
Advertisement
ಹೌದು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳೆ ಸೇತುವೆ ಮೇಲೆ ಮಳೆಗಾಲದಲ್ಲಿ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯುತ್ತದೆ. ಈ ಸೇತುವೆ ದಿನದಲ್ಲಿ ನಾಲ್ಕೈದು ಬಾರಿ ಮುಳುಗುತ್ತೆ. ಇದೇ ವರ್ಷದ ಆಗಸ್ಟ್ ತಿಂಗಳ ಮೊದಲ ವಾರದ ಮಳೆಗೆ ಒಂದೇ ವಾರಕ್ಕೆ ಹಲವು ಬಾರಿ ಮುಳುಗಡೆಯಾಗಿತ್ತು. ಕಳೆದ 20 ವರ್ಷಗಳಿಂದಲೂ ಇದು ನಿರಂತರ ಕ್ರಿಯೆ. ಬೇಸಿಗೆ ಬಂದಾಗ ಮಾಡ್ತೀವಿ ಅನ್ನೋ ಜನನಾಯಕರು 20 ವರ್ಷಗಳಿಂದ ಚುನಾವಣೆಗಳನ್ನ ದೂಡ್ತಿದ್ದಾರೆ.
Advertisement
Advertisement
ಸೇತುವೆ ಮುಳುಗಡೆಯಾದರೆ ಯಾವ ವಾಹನವೂ ಸಂಚರಿಸುವಂತಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬರುವ ಹೊರ ರಾಜ್ಯ, ಜಿಲ್ಲೆಯ ವಾಹನಗಳು ರಾತ್ರಿ ವೇಳೆ ಈ ಸೇತುವೆ ಮೇಲೆ ನೀರಲ್ಲಿ ತೊಯ್ದು ನಿಂತ ಉದಾಹರಣೆಗಳಿವೆ. ಆದರೆ ಈವರೆಗೂ ಕೂಡ ಸಂಬಂಧಪಟ್ಟೋರಿಗೆ ಬೇಸಿಗೆನೆ ಬಂದಿಲ್ಲ. ಇದೀಗ ನೀರಿನಲ್ಲಿ ತೊಯ್ದ ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಆಗುವ ಅನಾಹುತ ದೊಡ್ಡ ಪ್ರಮಾಣದ್ದಾಗಿರುತ್ತೆ. ಸೇತುವೆಯನ್ನ ಎತ್ತರಿಸಿಕೊಡುವಂತೆ ಸ್ಥಳೀಯರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಸ್ಥಳೀಯರ ಮನವಿಗೆ ಸರ್ಕಾರದಿಂದ ಸಿಕ್ಕ ಕೊಡುಗೆ ಶೂನ್ಯ.
Advertisement
ಸೇತುವೆಗೆ ಯಾವುದೇ ತಡೆಗೋಡೆಗಳಿಲ್ಲ. ರಾತ್ರಿ ವೇಳೆ ವಾಹನ ಸ್ವಲ್ಪ ಜಾರಿದ್ರು ಕೂಡ ನದಿ ಪಾಲಾಗೋದ್ರಲ್ಲಿ ಎರಡು ಮಾತಿಲ್ಲ. ಈ ಮಾರ್ಗವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನ ಪಡೆಯೋಕೆ ಹೋಗೋ ಪ್ರವಾಸಿಗರೇ ಹೆಚ್ಚು. ರಸ್ತೆ ಹಾಗೂ ಕರ್ವ್ ಪರಿಚಯವಿರೋ ಚಾಲಕರಾದ್ರೆ ಓಕೆ. ಹೊಸಬರಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಮಾರ್ಗ ನೀರಿನಲ್ಲಿ ಮುಳುಗಿದ್ರೆ ಸುಮಾರು 10 ರಿಂದ 15 ಕಿ.ಮೀ. ಸುತ್ತಿಕೊಂಡು ದೇಗುಲಕ್ಕೆ ಹೋಗಬೇಕಾಗುತ್ತೆ. ಮಳೆಗಾಲದಲ್ಲಿ ಬೇರೆ ಮಾರ್ಗವಿಲ್ಲದೇ ರೋಗಿಗಳು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಸೇತುವೆ ವರ್ಷದಿಂದ ವರ್ಷಕ್ಕೆ ತನ್ನ ಸಾಮಥ್ರ್ಯ ಕಳೆದುಕೊಳ್ತಿದೆ. 20 ವರ್ಷದಿಂದ ಜನರ ಸಮಸ್ಯೆಯೊಂದು ಅರ್ಥವಾಗದ ಇಲ್ಲಿನ ಜಡ್ಡು ಹಿಡಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹೊರನಾಡು ಅನ್ನಪೂರ್ಣೇಶ್ವರಿಯೇ ಬುದ್ಧಿ ಕೊಡಬೇಕೆಂದು ಸ್ಥಳೀಯರು ಅನ್ನಪೂರ್ಣೇಶ್ವರಿ ಬಳಿ ಬೇಡಿಕೊಳ್ತಿದ್ದಾರೆ.
ಒಟ್ಟಾರೆ ಮಲೆನಾಡಲ್ಲಿ ಯಥೇಚ್ಚವಾಗಿ ಸುರಿಯೋ ಮಳೆಯಿಂದ ಏಳೆಂಟು ತಿಂಗಳ ಕಾಲ ಸೇತುವೆ ಅಡಿಯಲ್ಲಿ ಶಾಂತಳಾಗಿ ಹರಿಯೋ ಭದ್ರೆ ಮಳೆಗಾಲದಲ್ಲಿ ಅಷ್ಟೆ ವೇಗವಾಗಿ ಹರಿಯುತ್ತಾಳೆ. ಮುಂದೊಂದು ದಿನ ಮತ್ತೊಂದು ದೊಡ್ಡ ಅನಾಹುತವಾದಾಗ ಸರ್ಕಾರ ಕೈಹಿಸುಕಿಕೊಳ್ಳುವ ಬದಲು ಕೂಡಲೇ ಇತ್ತ ಗಮನ ಹರಿಸಿ ಈ ಸೇತುವೆಗೆ ತಡೆಗೋಡೆ ನಿರ್ಮಿಸಿ, ಸೇತುವೆಯನ್ನ ಎತ್ತರಿಸೋ ಕಾರ್ಯಕ್ಕೆ ಮುಂದಾಗ್ಲಿ ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.