20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ‘ಕನ್ನಡಿಯೊಳಗಿನ ಗಂಟು’: ಸಿದ್ದರಾಮಯ್ಯ

Public TV
3 Min Read
Siddu Modi

-ಹಳೆ ಸರಕಿಗೆ ಹೊಸ ಹೊದಿಕೆ
-ಪ್ಯಾಕೇಜ್ ‘ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರಭಾರತ ಯೋಜನೆಯಡಿಯಲ್ಲಿ ಘೋಷಿಸಿರುವ ಕೊರೊನಾ ವಿಶೇಷ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಆಗಿದ್ದು, ಹಳೆ ಸರಕಿಗೆ ಹೊಸ ಹೊದಿಕೆ ಹೊದಿಸಿದಂತಾಗಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

20 ಲಕ್ಷ ಕೋಟಿ ರೂ. ಪ್ಯಾಕೇಜ್ ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದು ಕಂತುಗಳಾಗಿ ಹಂಚಿದರು. ಈ ಕುರಿತು ಸಹ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ತಮ್ಮದೇ ಲೆಕ್ಕಾಚಾರವನ್ನು ಜನರ ಮುಂದಿಟ್ಟಿದ್ದಾರೆ. 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Nirmala

ಸಿದ್ದರಾಮಯ್ಯನವರ ಟ್ವೀಟ್:
ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ರೂ.20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಟಿವಿ ಪರದೆಯಲ್ಲಿ, ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ, ಜನರ ಕೈಗೆ ಸಿಗುತ್ತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 5 ಕಂತುಗಳಲ್ಲಿ ಬಿಚ್ಚಿಟ್ಟ ಪ್ಯಾಕೇಜ್ ಅಂಕಿ ಅಂಶಗಳ ಕಸರತ್ತು. ಹಳೆಯ ಸರಕಿಗೆ ಹೊಸ ಹೊದಿಕೆ.

ಕೊರೊನಾ ಹಾವಳಿಯಿಂದ ದೇಶ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ ‘ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ’ ಅಷ್ಟೆ. ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಿದ್ದರೆ, ಪ್ರಧಾನಿಗಳು ಅವರು ಖಾಲಿಯಾಗಿರುವ ಸರ್ಕಾರದ ಜೇಬು ತುಂಬಲು ಹೊರಟಿದ್ದಾರೆ.

ಸರ್ಕಾರ ದಿವಾಳಿ ಆಗಿದೆಯೇ?: ಇದರಿಂದ ಬಡವರಿಗೆ,ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಸಿಕ್ಕಿದೆಷ್ಟು? ದೇಶದಲ್ಲಿ ಗುರುತಿಸಲಾದ 13 ಕೋಟಿ ಬಡವರಿಗೆ ಮಾಸಿಕ ರೂ.5000 ನೀಡಿದರೆ ಆಗುವ ವೆಚ್ಚ ರೂ.65,000 ಕೋಟಿ. ರೂ.7000 ನೀಡಿದರೆ ಆಗುವ ವೆಚ್ಚ 97,500 ಕೋಟಿ. ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು ಸರ್ಕಾರ ದಿವಾಳಿ ಆಗಿದೆಯೇ? ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಕೋಟಿಗಳ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ.

ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರು ಈಗಾಗಲೇ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿದ್ದಾರೆ. ಅವರ ಹಳೆ ಸಾಲ ಮನ್ನಾ ಮಾಡಿ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಸಲಕರಣೆಗಳ ಮೇಲಿನ ಜಿಎಸ್ ಟಿ ರದ್ದುಪಡಿಸಿ ಎಂಬ ಬೇಡಿಕೆ ಬಗ್ಗೆ ನರೇಂದ್ರ ಮೋದಿಯವರು ಮೌನವಾಗಿದ್ದಾರೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ. ದೇಶದಲ್ಲಿರುವ 6.2 ಲಕ್ಷ ಕೋಟಿ ಕಿರು ಉದ್ದಿಮೆಗಳಲ್ಲಿ 45 ಲಕ್ಷ ದೊಡ್ಡ ಗಾತ್ರದ ಕಿರು ಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಉಳಿದವರ ಗತಿ ಏನು?

ದುಡ್ಡು ಮಾಡುವ ಯೋಚನೆ: ಸಣ್ಣ ಕೈಗಾರಿಕೆಗಳಿಗೆ ಸಾಲ, ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ಹೇಳಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲಮಾಡುವ ಶಕ್ತಿ ಎಲ್ಲಿದೆ? ಕಾರ್ಮಿಕರ ಸಂಬಳ ನೀಡಿಕೆಗೆ ನೆರವು, ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ ಸಣ್ಣ ಕೈಗಾರಿಕೆಗಳ ರಕ್ಷಣೆ ಸಾಧ್ಯ. ದೇಶದಲ್ಲಿ ಜನ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶದಲ್ಲಿ ವಿಮಾನ ಸಂಚಾರ ವ್ಯವಸ್ಥೆಯನ್ನು ಸುಲಭ ಮಾಡಿ ದುಡ್ಡು ಮಾಡುವ ಯೋಚನೆಯಲ್ಲಿದೆ. ಇದು ಹಸಿದ ಹೊಟ್ಟೆಗಳ ಅಪಹಾಸ್ಯವಲ್ಲದೆ ಇನ್ನೇನು?

ದೇಶಪ್ರೇಮದ ವಾರಸುದಾರರು ತಾವೆಂದು ಸಾರಿಸಾರಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈಗ ರಕ್ಷಣಾ ಇಲಾಖೆಯ ಎಫ್‍ಡಿಐ ಮಿತಿಯನ್ನು ಶೇ.74ಕ್ಕೆ ಹೆಚ್ಚಿಸುವ ಮೂಲಕ ದೇಶದ ಭದ್ರತೆಯ ಜೊತೆ ರಾಜಿ ಮಾಡಲು ಹೊರಟಿದ್ದಾರೆ. ಇದೇನಾ ದೇಶ ಪ್ರೇಮ?

Share This Article
Leave a Comment

Leave a Reply

Your email address will not be published. Required fields are marked *