ಭೂಮಿ ತಾಯಿಯನ್ನ ನಂಬಿ ಕೆಟ್ಟವರಿಲ್ಲ. ತನ್ನನ್ನು ನಂಬಿ ಬಂದ ಎಲ್ಲರಿಗೂ ಭೂ ತಾಯಿ ಆಶ್ರಯ ನೀಡಿ ಸಾಕಿ ಸಲಹುತ್ತಾಳೆ ಅನ್ನೋ ಮಾತಿದೆ. ಭೂ ತಾಯಿ ನಂಬಿ ಬದುಕು ಕಟ್ಟಿಕೊಂಡ ಯಶಸ್ವಿ ರೈತನ ಜೀವನ ಕಥೆ ಇಲ್ಲಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನಿವಾಸಿ ರಾಜಶೇಖರ್ ಪಾಟೀಲ್ ಕೃಷಿಯಿಂದಲೇ ಕೋಟಿ ಕೋಟಿ ಅದಾಯವನ್ನ ತಮ್ಮದಾಗಿಸಿಕೊಂಡಿದ್ದಾರೆ.
Advertisement
ರಾಜಶೇಖರ್ ಪಾಟೀಲ್ ಕೃಷಿ ಕುಟುಂಬದವರು. 30 ಎಕರೆ ಜಮೀನು ಹೊಂದಿದ್ದರೂ ಮಳೆಯ ಕೊರತೆಯಿಂದಾಗಿ ಉತ್ತಮ ಇಳುವರಿ ಇರಲಿಲ್ಲ. ಹಾಗಾಗಿ ಪದವಿ ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ ರಾಜಶೇಖರ್ ಪ್ರಯತ್ನಿಸಿದ್ದರು. ಆದ್ರೆ ಸರ್ಕಾರಿ ಉದ್ಯೋಗ ಸಿಗದ ಹಿನ್ನೆಲೆ ರಾಜಶೇಖರ್ ಖಾಸಗಿ ಕಂಪನಿಯತ್ತ ಮುಖ ಮಾಡಿದ್ದರು. ಆದರೂ ಉತ್ತಮ ಸಂಬಳ ಸಿಗದಿದ್ದಾಗ ರಾಜಶೇಖರ್ ಅವರಿಗೆ ಹೊಳೆದಿದ್ದು ಬಿದಿರು ಕೃಷಿ ಐಡಿಯಾ. ಇದೇ ಐಡಿಯಾ ರಾಜಶೇಖರ್ ಅವರನ್ನ ಕೋಟ್ಯಧಿಪತಿಯನ್ನಾಗಿ ಮಾಡಿದ್ದು, ಸದ್ಯ 54 ಎಕರೆ ಜಮೀನಿನಲ್ಲಿ ಬಂಬೂ ಬೆಳೆಯುತ್ತಿದ್ದಾರೆ.
Advertisement
Advertisement
ಆರಂಭದಲ್ಲಿ ಇಲ್ಲಿ ವಿದ್ಯುತ್ ಸಂಪರ್ಕ ಮತ್ತು ಜಲ ಮೂಲವೇ ಇರಲಿಲ್ಲ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ್ರೂ ನೌಕರಿ ಸಿಗಲಿಲ್ಲ. ಕೊನೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ರಾಲೇಗನ್ಗೆ ತೆರಳಿದೆ. ಅವರಿಗೆ ಗ್ರಾಮದ ಕೆಲಸಕ್ಕಾಗಿ ಕೆಲ ಯುವಕರ ಅಗತ್ಯವಿತ್ತು. ಆದ್ರೆ ಅಲ್ಲಿಯೂ ನನ್ನ ಸೆಲೆಕ್ಷನ್ ಆಗಲಿಲ್ಲ. ನನ್ನ ಮನವಿ ಬಳಿಕ ಅಣ್ಣಾ ಹಜಾರೆ ಅವರು ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸ ನೀಡಿದ್ದರು. ಈ ಕೆಲಸಕ್ಕೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಿಗುತ್ತಿತ್ತು. ನಾಲ್ಕೈದು ವರ್ಷ ಅವರ ಬಳಿ ಕೆಲಸ ಮಾಡಿದ್ದರಿಂದ ಕೃಷಿಯಲ್ಲಿ ಮಿತ ಜಲ ಬಳಕೆ ಸೇರಿದಂತೆ ತೋಟಗಾರಿಕೆಯ ಮಾಹಿತಿ ಸಿಕ್ತು ಎಂದು 52 ವರ್ಷದ ರಾಜಶೇಖರ್ ಪಾಟೀಲ್ ಹೇಳುತ್ತಾರೆ.
Advertisement
ಮೊದಲ ವರ್ಷದಲ್ಲೇ 20 ಲಕ್ಷ ಟರ್ನ್ ಓವರ್:
ರಾಜಶೇಖರ್ ಅವರ ತಂದೆ ಪಾರ್ಶ್ವವಾಯುಗೆ ತುತ್ತಾಗುತ್ತಾರೆ. ಹಾಗಾಗಿ ಕೆಲ ವರ್ಷಗಳ ಹಿಂದೆ ವೃತ್ತಿ ಜೀವನ ಆರಂಭಿಸಿದ್ದ ರಾಜಶೇಖರ್ ಗ್ರಾಮಕ್ಕೆ ಹಿಂದಿರುಗಿದ್ದರಿಂದ ತಮ್ಮ ಜಮೀನಿನಲ್ಲಿಯೇ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಈ ವೇಳೆ ಪಕ್ಕದೂರಿನ ಓರ್ವ ರೈತ ನಷ್ಟದ ಹಿನ್ನೆಲೆ ತನ್ನ ಹೊಲದಲ್ಲಿಯ ಬಿದಿರು ನಾಶಗೊಳಿಸಲು ಮುಂದಾದ ವಿಷಯ ರಾಜಶೇಖರ್ ಅವರಿಗೆ ಗೊತ್ತಾಗುತ್ತೆ. ರಾಜಶೇಖರ್ ಸುಮಾರು 10 ಸಾವಿರ ರೂ. ನೀಡಿ ಅಲ್ಲಿಯ ಬಿದಿರು ಸಸಿಗಳನ್ನ ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡ್ತಾರೆ. ಮೂರು ವರ್ಷದ ಬಳಿಕ ಬಿದಿರು ಮಾರಿದಾಗ ಮೊದಲ ವರ್ಷದ ಆದಾಯವೇ 20 ಲಕ್ಷ ರೂ. ಆಗಿರುತ್ತೆ.
ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದಿರು: ಮೊದಲ ವರ್ಷವೇ ಅತ್ಯಧಿಕ ಲಾಭ ಪಡೆದ ರಾಜಶೇಖರ್ ಅವರ ಆತ್ಮವಿಶ್ವಾಸ ಹೆಚ್ಚಾಗಿತ್ತು. ಮತ್ತೆ ಬಿದಿರು ನಾಟಿ ಮಾಡಿ, 10 ಕಿಲೋ ಮೀಟರ್ ಉದ್ದದ ಕಾಲುವೆಯನ್ನ ಸ್ವಚ್ಛಗೊಳಿಸಿ, ಮಳೆಯ ನೀರು ಒಂದೆಡೆ ಸಂಗ್ರಹವಾಗುವಂತೆ ಮಾಡಿಕೊಂಡರು. ಇದರಿಂದಲೇ ಗ್ರಾಮಸ್ಥರ ದಾಹ ತಣಿಸಿದ್ದಾರೆ. ಇಂದು ರಾಜಶೇಖರ್ ಅವರ ತೋಟದ ಬಿದಿರು ಖರೀದಿಗಾಗಿ ಗ್ರಾಹಕರ ದೂರ ದೂರ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಸದ್ಯ ರಾಜಶೇಖರ್ ತೋಟದಲ್ಲಿ ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದಿರು ಬೆಳೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೇ ರಾಜಶೇಖರ್ ಜಮೀನಿನಲ್ಲಿಯೇ ನರ್ಸರಿ ಆರಂಭಿಸಿದ್ದು, ಬಿದಿರು ಸಸಿಗಳನ್ನ ಬೆಳೆಯಲಾಗುತ್ತದೆ.
ಕೃಷಿ ಜೊತೆಗೆ ತಮ್ಮ ತೋಟಕ್ಕೆ ಆಗಮಿಸುವ ವಿದ್ಯಾರ್ಥಿಗಳು, ರೈತರಿಗೆ ರಾಜಶೇಖರ್ ತರಬೇತಿ ನೀಡುವ ಕೆಲಸ ಮಾಡುತ್ತಾರೆ. ನಾಗ್ಪುರದಲ್ಲಿ ನಡೆದ ಆಗ್ರೋ ವಿಸನ್ ಕಾನ್ಫೆರನ್ಸ್ ನಲ್ಲಿ ಮುಖ್ಯ ಅತಿಥಿಯನ್ನಾಗಿ ರಾಜಶೇಖರ್ ಅವರನ್ನ ಆಹ್ವಾನಿಸಲಾಗಿತ್ತು. ಇಂಡಿಯನ್ ಬಂಬೂ ಮಿಶನ್ ನಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ 100ಕ್ಕೂ ಹೆಚ್ಚು ಜನ ರಾಜಶೇಖರ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಿದಿರು ಕೃಷಿ ಹೇಗೆ?:
ಬಿದಿರು ಬೆಳೆಯಲು ನಿರ್ದಿಷ್ಟ ಫಲವತ್ತತೆಯ ಜಮೀನು ಬೇಕಿಲ್ಲ. ಅತಿ ಹೆಚ್ಚು ನೀರು, ಆರೈಕೆಯ ಬಿದಿರು ಕೇಳಲ್ಲ. ಸಾಮಾನ್ಯವಾಗಿ ಜುಲೈನಲ್ಲಿ ಬಿದಿರು ನೆಡಲಾಗುತ್ತದೆ. ಮೂರು ವರ್ಷದ ಬಳಿಕ ಇಳುವರಿ ನಿಮ್ಮ ಕೈ ಸೇರುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಸಹ ನೀವು ಬೆಳೆದ ಬಿದಿರಿನ ಜಾತಿಯ ಮೇಲೆ ನಿರ್ಧರವಾಗುತ್ತದೆ. ಹಾಗಾಗಿ ಆರಂಭದಲ್ಲಿ ಯಾವ ವಿಧದ ಬಿದಿರು ಬೆಳೆಯಲಾಗ್ತಿದೆ ಎಂಬುದನ್ನ ತಿಳಿದುಕೊಳ್ಳಬೇಕು. ಬಿದಿರುಗಳ ನಡುವೆ ಮೂರರಿಂದ ನಾಲ್ಕು ಮೀಟರ್ ಅಂತರವಿರುವಂತೆ ನೋಡಿಕೊಳ್ಳಬೇಕು. ಈ ಜಾಗದಲ್ಲಿ ಬೇರೆ ಬೆಳೆಗಳನ್ನ ಬೆಳೆದುಕೊಳ್ಳಬಹುದು. ಬಿದಿರು ಬೆಳೆಯಲು ಇಚ್ಛಿಸುವ ರೈತರು ರಾಷ್ಟ್ರೀಯ ಬಂಬೂ ಮಿಶನ್ ಸಹಾಯ ಪಡೆದುಕೊಳ್ಳಬಹುದು ಎಂದು ರಾಜಶೇಖರ್ ಹೇಳುತ್ತಾರೆ.
ಇಂದು ಮಾರುಕಟ್ಟೆಯಲ್ಲಿ ಬಿದಿರು ಉತ್ಪನ್ನಗಳು ಬೇಡಿಕೆಯನ್ನ ಹೊಂದಿದೆ. ಕೇವಲ ಗೋವಾ ಅಲ್ಲದೇ ದೇಶದ ಪ್ರತಿ ಭಾಗದಲ್ಲಿ ಮನೆಯ ಅಲಂಕಾರಿಕ ವಸ್ತುಗಳಿಗಾಗಿ ಬಿದಿರು ಬಳಸುತ್ತಾರೆ. ಏಣಿ, ಚಾಪೆ, ಪೀಠೋಪಕರಣ, ಆಟಿಕೆ ಸೇರಿದಂತೆ ಹಲವು ವಸ್ತುಗಳ ಉತ್ಪಾದನೆಯಲ್ಲಿ ಬಿದಿರು ಬಳೆಕೆಯಾಗುತ್ತದೆ. ರಾಜಶೇಖರ್ ಅವರು ಹೇಳುವಂತೆ, ದೇಶದಲ್ಲಿ ಬಿದಿರು ಉತ್ಪಾದನೆ ಕಡಿಮೆ. ಆದ್ರೆ ಬೇಡಿಕೆ ಹೆಚ್ಚು. ಒಂದು ಎಕರೆ ಬಿದಿರು ಹಚ್ಚಲು ಸುಮಾರು 10 ಸಾವಿರ ರೂ. ವ್ಯಯವಾಗುತ್ತೆ. ಅದೇ ಮೂರು ವರ್ಷಗಳ ನಂತ್ರ ಲಕ್ಷ ಲಕ್ಷ ನಿಮ್ಮ ಹಣ ಜೇಬು ಸೇರುತ್ತೆ. ಒಮ್ಮೆ ಬಿದಿರು ಹಚ್ಚಿದ್ರೆ ಮುಂದಿನ 30 ರಿಂದ 40 ವರ್ಷ ಇರುತ್ತೆ. ಗುಣಮಟ್ಟದ ಆಧಾರದ ಮೇಲೆ ಒಂದು ಬಿದಿರು ಬೆಲೆ 20 ರೂ.ಯಿಂದ 100 ರೂ.ವರೆಗೆ ಲಭ್ಯವಾಗುತ್ತದೆ.