– ಬಾಲಕನ ಪಾಲಿಗೆ ರಣರಾಕ್ಷಸಿಯಾರದ ಅಜ್ಜಿ, ತಾಯಿ
ಬೆಂಗಳೂರು: ಅಮ್ಮ ಅಂದರೆ ನಿಸ್ವಾರ್ಥ ಜೀವಿ, ಆಕೆಗೆ ಮಕ್ಕಳ ಬಗ್ಗೆ ಕನಿಕರ ಜಾಸ್ತಿ. ತಾಯಿ ಅಂದರೆ ದೇವರಿದ್ದಂತೆ, ಮಕ್ಕಳಿಗೆ ಎಂದೂ ಕೆಟ್ಟದ್ದನ್ನು ಬಯಸದ ಮಹಾತಾಯಿ ಅಂತೆಲ್ಲಾ ಹೇಳುತ್ತಾರೆ. ಆದರೆ ಈ ಮಗುವಿನ ವಿಚಾರದಲ್ಲಿ ಇದೆಲ್ಲವೂ ಸುಳ್ಳಾಗಿದೆ. ಹೆತ್ತಮ್ಮ, ಅಜ್ಜಿಯೇ 2 ವರ್ಷದ ಮಗುವಿಗೆ ನರಕ ತೋರಿಸಿದ್ದಾರೆ.
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ ನಾಲ್ಕು ಮಕ್ಕಳಿವೆ. ಇದರಲ್ಲಿ ನಾಲ್ಕನೇ ಮಗು 2 ವರ್ಷದ ಮಗುವಿಗೆ ಅಜ್ಜಿ ಮತ್ತು ತಾಯಿ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಮತ್ತೊಂದು ಮಗುವಿನ ಹೆರಿಗೆಗಾಗಿ ಮಗುವಿನ ತಾಯಿ ತನ್ನ ತಾಯಿಯ ಮನೆಗೆ ಬಂದಿದ್ದಾಳೆ. ಈ ವೇಳೆ ಅಜ್ಜಿ ಹಾಗೂ ತಾಯಿ ಇಬ್ಬರು ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.
Advertisement
Advertisement
ಕಳೆದ 15 ದಿನಗಳಿಂದಲೂ ಈ ಮಗುವಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಮಗು ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆ ಮುಖಕ್ಕೆ ಗುದ್ದಿ ಅಜ್ಜಿ ಮುಬೀನಾ ಕೂಡ ಚಿತ್ರಹಿಂಸೆ ಕೊಟ್ಟಿದ್ದಾಳೆ. ಮಗು ಅಳುವುದನ್ನು ನಿಲ್ಲಿಸಲ್ಲ ಎಂಬ ಕಾರಣಕ್ಕೆ ಮನಸೋಇಚ್ಛೆ ಥಳಿಸಿದ್ದು, ಮಗುವಿನ ಮೈ ಕೈಯನ್ನು ಸುಟ್ಟು ಹಲ್ಲೆ ಮಾಡಿದ್ದಾಳೆ. ಗಂಡ ಇಮ್ರಾನ್ ಪಾಷಾ ಮಗು ಬಗ್ಗೆ ಕೇಳಿದರೆ ಹೆಂಡತಿ, ಅತ್ತೆ ಸೇರಿಕೊಂಡು ಮುಚ್ಚಿದ್ದಾರೆ.
Advertisement
Advertisement
ಪುಟ್ಟಕಂದಮ್ಮ ಮೇಲೆ ಹಲ್ಲೆ ಮಾಡಲು ಕಾರಣ, ಇಮ್ರಾನ್ ಪಾಷಾ ಹಾಗೂ ಅಜೀರಾ ಪ್ರೀತಿಸಿ ಮದುವೆಯಾಗಿದ್ದರು. ಇದು ಅಜೀರಾ ತಾಯಿ ಮುಬೀನಾಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಇದಾದ ನಂತರ ಅಜೀರಾ ಹೆರಿಗೆಗೆ ಮನೆಗೆ ಬಂದಿದ್ದಳು. ಈ ವೇಳೆ ಮಗು ಅಪ್ಪ ಬೇಕು ಎಂದು ಹಠ ಮಾಡಿದೆ. ಈ ಕಾರಣಕ್ಕೆ ಮಗುವನ್ನು ಅಜ್ಜಿ ಮತ್ತು ತಾಯಿ ಸೇರಿಕೊಂಡು ಥಳಿಸಿದ್ದಾರೆ.
ಸದ್ಯ ಮಗುವಿನ ಮುಖ, ಕಣ್ಣಿಗೆ ಗಾಯವಾಗಿದ್ದು, ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಇಮ್ರಾನ್ ಪಾಷಾ, ಪತ್ನಿ ಮತ್ತು ಅತ್ತೆ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯ ನಂತರ ಎಸ್ಕೇಪ್ ಆಗಿದ್ದ ಸೈತಾನ್ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.