ಚಿಕ್ಕಮಗಳೂರು: ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿದ್ದು, ಮಲೆನಾಡಲ್ಲಿ ಗೋ ಕಳ್ಳತನ ಸಕ್ರಿಯವಾಗಿದೆಯಾ ಎಂಬ ಅನುಮಾನ ರೈತರನ್ನ ಕಾಡುತ್ತಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಗೋವುಗಳು ಕಾಣೆಯಾಗುತ್ತಿವೆ.
ತಾಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಲಾಪುರ ಗ್ರಾಮದ ಸುತ್ತಮುತ್ತ ರಾಸುಗಳ ಕಳ್ಳತನ ಹೆಚ್ಚಾಗಿದೆ. ಈ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ರಾಸುಗಳು ಕಾಣೆಯಾಗುತ್ತಿದ್ದು, ಅಪರಿಚಿತರು ಕಳವು ಮಾಡುತ್ತಿರಬಹುದು ಎಂಬ ಅನುಮಾನ ಸ್ಥಳೀಯರನ್ನ ಕಾಡುತ್ತಿದೆ. ಸೋಮಾಲಾಪುರ ಗ್ರಾಮದ ನಿಲುಗುಳಿ, ಕುಂಬ್ರಿಹಬ್ಬು, ಹಬ್ಬಿಗದ್ದೆ, ಕಾಚಗಲ್ಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾಸುಗಳ ಕಳ್ಳತನ ಹೆಚ್ಚಾಗಿದೆ.
Advertisement
Advertisement
ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಲ್ಲಿ 20ಕ್ಕೂ ಹೆಚ್ಚು ದನಗಳು ಕಾಣೆಯಾಗಿವೆ. ದನಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇಯಲು ಬಿಟ್ಟ ಹಸುಗಳು ಮರಳಿ ಮನೆಗೆ ಬಾರದೆ ಇರುವುದರಿಂದ ಹೈನುಗಾರರು ಕಂಗಾಲಾಗಿದ್ದಾರೆ. ರೈತರು ಮೇಯಲು ಬಿಟ್ಟ ರಾಸುಗಳು ಸಂಜೆ ಮನೆಗೆ ಬಂದ ಮೇಲೆ ಬಂದವು ಎಂಬುದು ಖಾತ್ರಿಯಾಗುವಂತಹಾ ಸ್ಥಿತಿ ನಿರ್ಮಾಣವಾಗಿದೆ.
Advertisement
ಹಾಲು ಕೊಡುವ ದನವೊಂದು ವಾರದ ಹಿಂದೆ ಕಣ್ಮರೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಮ್ಮ ಮನೆಯ ನಾಲ್ಕು ಹಸುಗಳು ಕಾಣೆಯಾಗಿವೆ ಎಂದು ನಿಲುಗುಳಿ ಗ್ರಾಮದ ರೈತ ಮಹಿಳೆ ಪ್ರೇಮಾ ನೋವು ತೋಡಿಕೊಂಡಿದ್ದಾರೆ. ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಹಲವರ ಜಾನುವಾರುಗಳು ಕಾಣೆಯಾಗಿವೆ. ರಾಸುಗಳ ಕಣ್ಮರೆ, ಕಳ್ಳತನ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದ್ದು, ಹಳ್ಳಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
Advertisement
ಅಪರಿಚಿತರು ರಾಸುಗಳನ್ನ ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಲೆನಾಡಲ್ಲಿ ಗೋಕಳ್ಳತನ ಮಿತಿ ಮೀರಿದೆ. ಮೂಡಿಗೆರೆ ತಾಲೂಕಿನಲ್ಲೂ ಕಳೆದ 15 ದಿನಗಳ ಹಿಂದಷ್ಟೆ ರೈತ ಮಹಿಳೆಯ ಎರಡು ರಾಸುಗಳು ಕಳ್ಳತನವಾಗಿದ್ದವು. ರಾಸುಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರೈತ ಮಹಿಳೆ ಒಂದು ಲಕ್ಷ ಮೌಲ್ಯದ ಎರಡು ರಾಸುಗಳನ್ನ ಕಳೆದುಕೊಂಡು ಕಂಗಾಲಾಗಿದ್ದರು. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿಯಲ್ಲಿ ಗೋಕಳ್ಳತನ ನಡೆಯುತ್ತಿದ್ದು, ಪೊಲೀಸರು ಗೋಕಳ್ಳರ ಹೆಡೆಮುರಿ ಕಟ್ಟಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎರಡೇ ತಿಂಗಳಲ್ಲಿ ಲಕ್ಷ ಮೌಲ್ಯದ ಎರಡು ಹಸು ಕಳವು- ಕಣ್ಣೀರಿಟ್ಟ ರೈತ ಮಹಿಳೆ