ಕಾಸರಗೋಡು: ಭಾನುವಾರ ರಾತ್ರಿ ವೇಳೆ ದುಷ್ಕರ್ಮಿಗಳು ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕರ್ನಾಟಕ-ಕೇರಳ ಗಡಿಯ ಕಾಸರಗೋಡಿನಲ್ಲಿ ನಡೆದಿದ್ದು, ಈ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಭಾನುವಾರ ರಾತ್ರಿ 8 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಕೃಪೇಶ್ ಹಾಗೂ ಶರತ್ ಲಾಲ್ ಎಂದು ಗುರುತಿಸಲಾಗಿದೆ. ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಇಬ್ಬರು ಕಾರ್ಯಕರ್ತರು ಬೈಕ್ ಮೇಲೆ ಮನೆಗೆ ತೆರೆಳುತ್ತಿದ್ದ ವೇಳೆ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
Advertisement
Advertisement
ಈ ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಾಂಗ್ರೆಸ್ ಸಿಪಿಐ(ಎಂ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಸಿಪಿಐಎಂ ಗೂಂಡಾಗಳನ್ನು ಬಳಸಿಕೊಂಡು ಈ ರೀತಿ ದುಷ್ಕೃತ್ಯ ನಡೆಸುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಐಎಂ ಪಕ್ಷದವರೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಆರೋಪಿಸಿದ್ದಾರೆ.
Advertisement
Advertisement
ಯಾವುದೇ ಗಲಾಟೆ ಅಥವಾ ಪ್ರಚೋದನೆ ಇಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲೂ ಭಾಗಿಯಾಗಿರಲಿಲ್ಲ. ಆದರೂ ಈ ರೀತಿ ಅವರನ್ನು ಹತ್ಯೆಗೈದಿದ್ದಾರೆ. ಸರ್ಕಾರ ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ, ಅವರಿಗೆ ಶಿಕ್ಷೆ ವಿಧಿಸಬೇಕೆಂದು ಚೆನ್ನಿತಾಲ ಆಗ್ರಹಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, ಹಂತಕರಿಗೆ ಶಿಕ್ಷೆ ಕೊಡಿಸುವವರೆಗೆ ನಮ್ಮ ಪಕ್ಷ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ಕಾಸರಗೋಡಿನಲ್ಲಿ ನಮ್ಮ ಯುವ ಕಾಂಗ್ರೆಸ್ ಕುಟುಂಬದ ಇಬ್ಬರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ಯುವಕರ ಕುಟುಂಬಗಳಿಗೆ ಕಾಂಗ್ರೆಸ್ ನೈತಿಕ ಬೆಂಬಲ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
The brutal murder of two members of our Youth Congress family in Kasargod, Kerala is shocking. The Congress Party stands in solidarity with the families of these two young men & I send them my deepest condolences. We will not rest till the murderers are brought to justice.
— Rahul Gandhi (@RahulGandhi) February 18, 2019
ಅಷ್ಟೇ ಅಲ್ಲದೆ, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಕಾಂಗ್ರೆಸ್ ಇಂದು ಕೇರಳ ಬಂದ್‍ಗೆ ಕರೆ ಕೊಟ್ಟಿದ್ದು, ವಿವಿಧೆಡೆ ಗಲಾಟೆ ನಡೆಯುತ್ತಿದೆ. ಕೃಪೇಶ್ ಮತ್ತು ಶರತ್‍ಲಾಲ್ ಹತ್ಯೆಗೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ ಮೆರವಣಿಗೆ ನಡೆಸಿದೆ. ಅಲ್ಲದೆ ಹಂತಕರನ್ನು ಕಾನೂನಿಗೆ ಒಪ್ಪಿಸುವ ತನಕ ಪಕ್ಷ ವಿಶ್ರಾಂತಿ ಪಡೆಯುವುದಿಲ್ಲ ಕಾಂಗ್ರೆಸ್ ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv