ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದೆ.
400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್ (NDRF), ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್ (NDRF) ತಂಡ ರಾತ್ರಿಯೇ ಸ್ಥಳಕ್ಕೆ ಬಂದಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದೆ.
Advertisement
Advertisement
20 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ಇನ್ನೊಂದು ಅಡಿ ಕೊರೆದರೆ ಮಗುವಿನ ಬಳಿಗೆ ರಕ್ಷಣಾ ತಂಡ ತಲುಪಲಿದೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ. ಜಿಲ್ಲಾಡಳಿತ ಪೈಪ್ ಮೂಲಕ ಆಕ್ಸಿಜನ್ ಕಳುಹಿಸಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ಅಮಿತ್ ಶಾರನ್ನು ಭೇಟಿಯಾಗದೇ ಬರಿಗೈಯಲ್ಲಿ ಈಶ್ವರಪ್ಪ ವಾಪಸ್
Advertisement
ಕಾರ್ಯಾಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸುತ್ತಿದ್ದಾರೆ.
Advertisement
ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.