ಬೆಂಗಳೂರು: ನಗರದ ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಇಂದು ಮತ್ತೊಂದು ಹೊಸ ಅತಿಥಿಯ ಆಗಮನವಾಗಿದೆ.
ಹೌದು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಪ್ರಾಣಿಗಳ ಗುಂಪಿಗೆ ಜಿರಾಫೆಯೊಂದು ಸೇರ್ಪಡೆಗೊಂಡಿದೆ. ಮೈಸೂರಿನ ಮೃಗಾಲಯದಲ್ಲಿ ಕೃಷ್ಣಾರಾಜ ಹಾಗೂ ಲಕ್ಷ್ಮಿ ಜಿರಾಫೆಗೆ ಜನಿಸಿದ್ದ ಗೌರಿ ಎಂಬ 2 ವರ್ಷ, 2 ತಿಂಗಳ ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ತರಲಾಯಿತು.
ಮಧ್ಯರಾತ್ರಿ 12 ಗಂಟೆಗೆ ಕೇಜ್ ಗೆ ಹತ್ತಿದ ಗೌರಿಯನ್ನು ಟ್ರಕ್ ಮೂಲಕ ಬನ್ನೇರುಘಟ್ಟಕ್ಕೆ ತಂದು, ಉದ್ಯಾನವನದಲ್ಲಿ ಜಿರಾಫೆಗೆಂದು ನಿರ್ಮಿಸಲಾಗಿರುವ ಆವರಣಕ್ಕೆ ಬಿಡಲಾಯಿತು. ಈ ಮೊದಲು ಜಿರಾಫೆ ಇರುವ ಕೇಜ್ ಗೆ ಪೂಜೆ ಸಲ್ಲಿಸಲಾಗಿತ್ತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಕೇಜ್ ನಿಂದ ಹೊರಬರಲು ಸತಾಯಿಸಿದ ಗೌರಿಗೆ ಹಣ್ಣು, ಬೆಲ್ಲ ಹಾಗೂ ಮರದ ಎಲೆಗಳ ಆಸೆ ತೋರಿಸಿ ಹೊರಕ್ಕೆ ಕರೆತರಲಾಯಿತು.
ಸದ್ಯಕ್ಕೆ ಒಂದೆರಡು ದಿನಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿಷೇಧವಿದ್ದು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡ ನಂತರ ಸಾರ್ವಜನಿಕರಿಗೆ ಮುಕ್ತ ಮಾಡಲಾಗುವುದು ಎಂದು ಉದ್ಯಾನವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.