ಪಾಟ್ನಾ: ದ್ವಿಚಕ್ರ ವಾಹನ (2-Wheeler) ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ನಿಯಮವನ್ನು (Traffic Violation) ಪಾಲಿಸದ್ದಕ್ಕೆ ಪೊಲೀಸರು ಚಲನ್‍ನನ್ನು ಕಳುಹಿಸಿದ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ (Challan) ಬರುವುದು ಸಾಮಾನ್ಯ. ಆದರೆ ಬಿಹಾರದ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ. ಕೃಷ್ಣಕುಮಾರ್ ಝಾ ಎಂಬಾತ ಸ್ಕೂಟಿಯಲ್ಲಿ ಬನಾರಸ್‌ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್‍ಗೆ 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎನ್ನುವುದರ ಕುರಿತು ಚಲನ್ ಬಂದಿದೆ. ಆ ಚಲನ್‍ನಲ್ಲಿ 2020ರ ಅಕ್ಟೋಬರ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.
ಇದನ್ನು ನೋಡಿದ ಕೃಷ್ಣಕುಮಾರ್ ಒಮ್ಮೆಲೇ ಶಾಕ್ ಆಗಿದ್ದಾರೆ. ಬೈಕ್‍ನಲ್ಲಿ ಹೋಗಿರುವುದಕ್ಕೆ ಸೀಟ್ ಬೇಲ್ಟ್ ಯಾಕೆ ಧರಿಸಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರು ತಾಂತ್ರಿಕ ದೋಷದಿಂದಾಗಿ ಕೆಲವೊಮ್ಮೆ ಈ ರೀತಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ
ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್‌ನಿಂದ ನೀಡಲಾಗಿದೆ. ಈಗ, ನಾವು ಇವೆಲ್ಲವನ್ನೂ ಇ-ಚಲನ್‍ಗಳಾಗಿ ಮುಚ್ಚಿಡುವ ಪ್ರಕ್ರಿಯೆಯಲ್ಲಿದ್ದೇವೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ