ಹೈದರಾಬಾದ್: ತಾಯಿಯ ಅನುಮಾನಾಸ್ಪದ ಸಾವಿನ ತನಿಖೆಯ ವಿಚಾರಣೆ ನೆಪದಲ್ಲಿ ಇಬ್ಬರೂ ಸಹೋದರಿಯರಿಗೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ತೆಲಂಗಾಣ ರಾಜ್ಯದ ಮಂಚೆರಿಯಾಲ್ ಜಿಲ್ಲೆಯ ಮಂದಮರ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ರುಕ್ಸನಾ (17) ಮತ್ತು ರಿಜ್ವನಾ (18) ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಸಹೋದರಿಯರು. ರುಕ್ಸನಾ ಮತ್ತು ರಿಜ್ವನಾರ ತಾಯಿ ಪರ್ವಿನ್ ಬಿ ಅವರ ಶವ ಒಂದು ವಾರದ ಹಿಂದೆ ದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಪರ್ವೀನ್ ಶವದ ಕುತ್ತಿಗೆ ಭಾಗದಲ್ಲಿ ಬಟ್ಟೆ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು.
Advertisement
ಪ್ರಕರಣ ದಾಖಲಿಸಿಕೊಂಡ ದೇವಪುರ ಠಾಣಾ ಪೊಲೀಸರು ತನಿಖೆಯ ವಿಚಾರಣೆ ಸಂಬಂಧಿಸಿದಂತೆ ಶನಿವಾರ ಇಬ್ಬರೂ ಸಹೋದರಿಯರನ್ನು ಠಾಣೆಗೆ ಕರೆಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನು ಮಂದಮರ್ರಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಮಂದಮರ್ರಿ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನಿಮ್ಮ ತಾಯಿಯನ್ನು ಏಕೆ ಕೊಲೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Advertisement
ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಸಹೋದರಿಯರು, ನಮ್ಮ ಸ್ವಂತ ತಾಯಿಯನ್ನು ನಾವೇಕೆ ಕೊಲ್ಲುತ್ತೇವೆ. ಕೊಲ್ಲುವ ಉದ್ದೇಶವಾದರೂ ನಮಗೆ ಏನಿದೆ ಎಂದು ತಿಳಿಸಿದ್ದಾರೆ. ವಿಚಾರಣೆಗಾಗಿ ಸಹೋದರಿಯರನ್ನು ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. ಈ ವೇಳೆ ಮೂರರಿಂದ ನಾಲ್ಕು ಮಹಿಳಾ ಪೊಲೀಸ್ ಪೇದೆಗಳಿಂದ ನಮ್ಮನ್ನು ಮೊಣಕಾಲಿನ ಮೇಲೆ ಕೂರಿಸಿ ಲಾಠಿಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಸಹೋದರಿಯರು ಈಗ ಆರೋಪಿಸಿದ್ದಾರೆ.
Advertisement
ವಿಮೆಯ ಹಣ: ಯುವತಿಯರ ತಂದೆ ನಾಲ್ಕು ತಿಂಗಳ ಹಿಂದೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದರು. ತಂದೆ ಸಾವಿನ ಬಳಿಕ 4 ಲಕ್ಷ ರೂ. ವಿಮೆಯ ಹಣ ತಾಯಿ ಪರ್ವಿನ್ ಕೈ ಗೆ ಸೇರಿತ್ತು. ವಿಮೆಯ ಹಣಕ್ಕಾಗಿ ಪರ್ವೀನ್ ಸಹೋದರ ಉಮನ್ ಪಾಶಾ ನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಪರ್ವಿನ್ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪೊಲೀಸರು ಉಮನ್ ಆಜ್ಞೆಯ ಮೇರೆಗೆ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.
Advertisement
ಪೊಲೀಸರು ಯುವತಿಯರಿಗೆ ಯಾವುದೇ ಕಿರುಕುಳ ನೀಡಿಲ್ಲ. ಕೇವಲ ಅವರ ತಾಯಿಯ ಸಾವಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಾಗಿದೆ. ಪರ್ವಿನ್ ಸಾವಿನ ವಿಚಾರಣೆಯಲ್ಲಿ ಇವರ ಹೇಳಿಕೆಗಳು ತನಿಖೆಗೆ ಸಹಾಯ ಮಾಡಲಿವೆ. ಪರ್ವಿನ್ ಕೊಲೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಿದ್ದೇವೆ ಎಂದು ಡಿಸಿಪಿ ಜಾನ್ ವೆಸ್ಲೇ ತಿಳಿಸಿದ್ದಾರೆ.