ತುಮಕೂರು: ಮರಕ್ಕೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ತಿಪಟೂರಿನ ಕೆಬಿ ಕ್ರಾಸ್ ಕುಂದೂರು ಪಾಳ್ಯದ ಬಳಿ ನಡೆದಿದೆ.
ಕಿರಣ್ (18) ಹಾಗೂ ತ್ರಿನೇಶ್ (20) ಮೃತಪಟ್ಟ ವಿದ್ಯಾರ್ಥಿಗಳು. ಕಿರಣ್ ಹಾಗೂ ತ್ರಿನೇಶ್ ಇಬ್ಬರು ತುರುವೇಕೆರೆ ತಾಲೂಕು ದಂಡಿನಶಿವರದವರಾಗಿದ್ದು, ಚಿಕ್ಕಮಗಳೂರಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬೆಳ್ಳಂಬೆಳಗ್ಗೆ ತೆರಳುವಾಗ ಈ ಘಟನೆ ಜರುಗಿದೆ.
ಮೃತ ವಿದ್ಯಾರ್ಥಿಗಳಾದ ಕಿರಣ್ ಹಾಗೂ ತ್ರಿನೇಶ್ ಜೊತೆ ಇನ್ನು ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಟಿಯೋಸ್ ಕಾರಿನಲ್ಲಿ ತೆರೆಳುತ್ತಿದ್ದರು. ಈ ವೇಳೆ ಕಾರು ನೇರಳೆ ಮರಕ್ಕೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ವಿದ್ಯಾರ್ಥಿಗಳನ್ನು ತುರುವೇಕೆರೆ ಹಾಗೂ ದಂಡಿನಶಿವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕೆಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.