ಗದಗ: ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ವಿಶೇಷ ಸಂಗೀತ ಪಾಠ ಶಾಲೆಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಅಂಧ, ಅನಾಥರ ಬಾಳಿಗೆ ನಂದಾ ದೀಪವಾದ ಗದುಗಿನ ವೀರೇಶ್ವರ ಪುಣ್ಯಾಶ್ರಮ, ಸಂಗೀತ ಕಾಶಿ ಎಂದೆ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸಂಗೀತ ಗಾನ ಸುಧೆಯು ಪಾವನ ಗಂಗೆಯಾಗಿದ್ದು, ಸಂಗೀತ ಸಾಧಕರಿಗೆ ಇದು ಪುಣ್ಯದ ಸ್ವರ್ಗ ಭೂಮಿ. ಗದುಗಿನ ಪುಣ್ಯಾಶ್ರಮ ಗುರುಕುಲ ಪದ್ಧತಿಯಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಅಂಧ ಮಕ್ಕಳ ಸಂಗೀತ ಸಾಹಿತ್ಯ ಮಹಾವಿದ್ಯಾಲಯ 1914 ರಲ್ಲಿ ಸ್ಥಾಪಿತಗೊಂಡಿತ್ತು. ನಾಡಿನ ಶಿಷ್ಯರು-ಸದ್ಭಕ್ತರ ಸಹಾಯ ಸಹಕಾರಗಳೊಂದಿಗೆ ಪುಣ್ಯಾಶ್ರಮ ಅಭಿವೃದ್ಧಿ ಹೊಂದಿ ಹೆಮ್ಮರವಾಗಿ ಬೆಳೆಯಿತು. ಪ್ರತಿನಿತ್ಯ ನಿರಂತರ ಅನ್ನ ದಾಸೋಹ, ಸಂಗೀತ ದಾಸೋಹ ಹಾಗೂ ಅಕ್ಷರ ದಾಸೋಹದಂತೆ ತ್ರಿವಿಧ ದಾಸೋಹಗಳೊಂದಿಗೆ ಮಾದರಿಯ ಸಂಸ್ಥೆ, ಆಶ್ರಮವಾಗಿ ರೂಪಗೊಂಡಿದೆ. ಇದನ್ನೂ ಓದಿ: ಕಾಡಿನಲ್ಲೇ ತನ್ನ ಆಯಸ್ಸು ಕಳೆದ 90ರ ವೃದ್ಧನಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ
Advertisement
Advertisement
ಲಿಂಗೈಕ್ಯ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು 1989-90 ರಲ್ಲಿ ಅಂಧರ ವಸತಿಯುತ ವಿಶೇಷ ಸಂಗೀತ ಪಾಠ ಶಾಲೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದರು. ಈಗ ಶ್ರೀ ಕಲ್ಲಯ್ಯಜ್ಜನವರು ಅದೇ ಮಾರ್ಗದರ್ಶನದಲ್ಲಿ ಇಂದಿಗೂ ಮುನ್ನಡೆಸಿಕೊಂಡು ಬಂದಿದ್ದಾರೆ. ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಶಾಲೆಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರಕಿದಕ್ಕೆ ಪುಣ್ಯಾಶ್ರಮದ ಅಂಧ ಬಂಧುಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಾನಗಲ್ ಗುರು ಕುಮಾರೇಶ್ವರ, ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಶ್ರಮದ ಸಾವಿರಾರು ಅಂಧ – ಅನಾಥ ಮಕ್ಕಳ ಹರ್ಷಕ್ಕೆ ಪಾರವೇ ಇರಲಿಲ್ಲ.
Advertisement
Advertisement
ಅದೇ ರೀತಿ ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಯ ರಂಗಭೂಮಿ ಕಲಾವಿದೆ, ಸಾವಿತ್ರಿ ಗೌಡರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರಿಗೀಗ 65 ವಯಸ್ಸು. ಆದರೆ ಕಲಾವಿದೆ ಸಾವಿತ್ರಿ ಅವರು 7ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿ ರಂಗಭೂಮಿ ಪ್ರವೇಶಿಸಿದರು. ಅಜ್ಜ, ತಂದೆ ಹಾಗೂ ಈಗಿನ ಸಾವಿತ್ರಮ್ಮ ಈ ಮೂರು ತಲೆಮಾರುಗಳಿಂದ ಈ ಕುಟುಂಬ ರಂಗಭೂಮಿಯಲ್ಲಿ ಜೀವ ತೆತ್ತಿದೆ. ಸಾವಿತ್ರಿ ಬಾಲ ನಟಿಯಾಗಿ, ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ರೈಲಿಗೆ ಬೆಂಕಿ, ಗುಂಡಿನ ದಾಳಿ – 8 ಜನರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ಉತ್ತಮ ಬಾಲನಟಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಂಗ ತರುಣಿ ಪ್ರಶಸ್ತಿ ಲಭಿಸಿದ್ದು, ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಮಾರು 50 ವರ್ಷದ ಇವರ ರಂಗಭೂಮಿ ಜರ್ನಿಯಲ್ಲಿ ಸಾಕಷ್ಟು ಮನೆ ಮಾತಾಗಿದ್ದಾರೆ. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ತುಂಬಾನೆ ಖುಷಿ ಆಗ್ತಿದೆ ಅಂತಿದ್ದಾರೆ ರಂಗಭೂಮಿ ಕಲಾವಿದೆ ಸಾವಿತ್ರಿ.