ಚಿಕ್ಕಬಳ್ಳಾಪುರ: ಬರಿಗೈಯಲ್ಲಿ ಕಾರ್ಮಿಕರ ಕೈಯ್ಯಿಂದ ಚರಂಡಿ ಕ್ಲೀನ್ ಮಾಡಿಸಿದ ತಪ್ಪಿಗೆ ಇಬ್ಬರು ಜೈಲುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚರಂಡಿ ಸ್ವಚ್ಛತೆಗೆ ಕಾರ್ಮಿಕರನ್ನ ಕರೆತಂದಿದ್ದ ಟ್ರ್ಯಾಕ್ಟರ್ ಮಾಲೀಕ ಚಂದ್ರಶೇಖರ್ ಹಾಗೂ ಚರಂಡಿ ಸ್ವಚ್ಛತೆ ಮಾಡಲು ಹೇಳಿದ್ದ ಹೋಟೆಲ್ ಮಾಲೀಕ ಸಚ್ಚಿದಾನಂದಬಾಬು ಜೈಲುಪಾಲಾದವರು. ಗುರುವಾರದಂದು ನಗರದ ಶಿಡ್ಲಘಟ್ಟ ವೃತದ ಬಳಿ ಹೋಟೆಲ್ ಮುಂಭಾಗದ ಚರಂಡಿಯನ್ನ ಕೈಗೆ ಯಾವುದೇ ಗ್ಲೌಸ್, ಕಾಲಿಗೆ ಬೂಟು ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ ಕಾರ್ಮಿಕರು ಕ್ಲೀನ್ ಮಾಡಿದ್ದರು. ಇದನ್ನ ಸ್ವತಃ ನಗರ ಪ್ರದಕ್ಷಿಣೆ ಕೈಗೊಂಡಿದ್ದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಗೋಕುಲ್ ನಾರಾಯಣಸ್ವಾಮಿಯವರು ಕಂಡಿದ್ರು. ಹೀಗಾಗಿ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರ ನಿರ್ದೇಶನದ ಮೇರೆಗೆ ನಗರಸಭೆ ಆಯುಕ್ತ ಉಮಾಕಾಂತ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸ್ವಚ್ಛತೆ ಮಾಡಿಸುತ್ತಿದ್ದ ಟ್ರ್ಯಾಕ್ಟರ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
Advertisement
ನಗರಸಭೆಯಿಂದ ಅನುಮತಿ ಪಡೆಯದೆ ಹಾಗೂ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನ ನೀಡದೆ ದಿ ಪ್ರಾಹಿಬಿಶನ್ ಆಫ್ ಎಂಪ್ಲಾಯ್‍ಮೆಂಟ್ ಆ್ಯಸ್ ಮ್ಯಾನ್ಯುಯುಲ್ ಸ್ಕ್ಯಾವೆಂಜರ್ಸ್ ಅಂಡ್ ದೇರ್ ರಿಹ್ಯಾಬಿಲಿಟೇಷನ್ ಆಕ್ಟ್‍ನ ಕಲಂ 7ರ ಉಲ್ಲಂಘನೆ ಹಾಗೂ ಅಪಾಯಕಾರಿ ಸ್ವಚ್ಛತೆ ಮಾಡಿಸಿದ ಹಿನ್ನಲೆಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ.
Advertisement
ಈ ಕಾಯ್ದೆಯ ಪ್ರಕಾರ ತಪ್ಪು ಸಾಬೀತಾದ್ರೇ ತಪ್ಪಿತಸ್ಥರಿಗೆ 2 ಲಕ್ಷ ದಂಡ ಅಥವಾ 2 ವರ್ಷ ಸಜೆ ನೀಡುವ ಸಾಧ್ಯೆತೆ ಇದೆ ಅಂತ ಹೇಳಲಾಗಿದೆ.