– ಅಬಕಾರಿ ಇಲಾಖೆಯಲ್ಲಿ ಕಿತ್ತಾಟ
ಶಿವಮೊಗ್ಗ: ಸಿಎಂ ತವರಿನ ಅಬಕಾರಿ ಇಲಾಖೆಯ ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಫೈಟ್ ಮಾಡುತ್ತಿದ್ದಾರೆ. ಒಬ್ಬರು ವರ್ಗಾವಣೆ ಆಗಿದ್ದು, ಮತ್ತೊಬ್ಬರು ವರ್ಗಾವಣೆ ಜಾಗಕ್ಕೆ ಬಂದು ಕೂತಿದ್ದಾರೆ. ಆದರೆ ವರ್ಗಾವಣೆ ಆದ ಅಧಿಕಾರಿಯು ಡಿಸಿ ಕುರ್ಚಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಅಬಕಾರಿ ಇಲಾಖೆ ಸರ್ಕಾರಕ್ಕೆ ಆದಾಯ ತರುವ ಮಹತ್ತರ ಇಲಾಖೆಯಾಗಿದೆ. ವೈನ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್‍ಗಳ ಟ್ಯಾಕ್ಸ್ ಲೈಸನ್ಸ್ ನವೀಕರಣ ಸೇರಿದಂತೆ ಅನೇಕ ಕೆಲಸಗಳು ನಿತ್ಯವೂ ಇರುತ್ತವೆ. ಪ್ರತಿನಿತ್ಯ ಜಿಲ್ಲೆಯಲ್ಲಿ ಮದ್ಯ ಸರಬರಾಜು, ಅವುಗಳ ಮೇಲೆ ತೀವ್ರ ನಿಗಾ ವಹಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಇಂತಹ ಮಹತ್ತರ ಇಲಾಖೆಯಲ್ಲಿ ಡಿಸಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಫೈಟ್ ಮಾಡುತ್ತಿದ್ದಾರೆ.
Advertisement
Advertisement
ಡಿಸೆಂಬರ್ 3ರಂದು ಸದ್ಯ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಡಿಸಿ ರೂಪಾ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸರ್ಕಾರ ವರ್ಗಾವಣೆ ಮಾಡಿದೆ. ಇನ್ನೂ ಕಾರವಾರದ ಡಿಸಿ ಆಗಿರುವ ಮೋಹನ್ ಅವರನ್ನು ಶಿವಮೊಗ್ಗ ಹೆಚ್ಚುವರಿ ಪ್ರಭಾರಿ ಡಿಸಿ ಆಗಿ ಸರ್ಕಾರವು ಆದೇಶ ಹೊರಡಿಸಿದೆ. ಡಿ. 6ರಿಂದ ಮೋಹನ್ ಅವರು ಶಿವಮೊಗ್ಗ ಅಬಕಾರಿ ಇಲಾಖೆಯ ಡಿಸಿಯಾಗಿ ಚಾರ್ಜ್ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಹಿಂದೆ ಇದ್ದ ಡಿಸಿ ರೂಪಾ ಅವರು ಈ ವರ್ಗಾವಣೆ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಮೊರೆ ಹೋಗಿದ್ದಾರೆ. ಕೆಎಟಿಯಲ್ಲಿ ಯಥಾಸ್ಥಿತಿ ಕಾಪಾಡಿ ಎನ್ನುವ ಆದೇಶ ಸಿಕ್ಕಿದೆ. ಈ ಕಾರಣದಿಂದ ಅವರು ಅಬಕಾರಿ ಡಿಸಿ ಹುದ್ದೆಯಿಂದ ನಿರ್ಗಮನ ಹೊಂದದೇ ಅದೇ ಕಚೇರಿಯಲ್ಲಿ ಅಬಕಾರಿ ಡಿಸಿ ಆಗಿ ಮುಂದುವರಿದಿದ್ದಾರೆ. ಸರ್ಕಾರದ ಆದೇಶದಂತೆ ಕಾರವಾರದಿಂದ ವರ್ಗಾವಣೆ ಆಗಿ ಡಿ. 6ರಂದು ಚಾರ್ಜ್ ಪಡೆದು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಮೋಹನ್ ಹೇಳುತ್ತಿದ್ದಾರೆ.
Advertisement
Advertisement
ಹೀಗೆ ಕಳೆದ 20 ದಿನಗಳಿಂದ ಶಿವಮೊಗ್ಗ ಅಬಕಾರಿ ಇಲಾಖೆಯಲ್ಲಿ ದೊಡ್ಡ ಗೊಂದಲ ಶುರುವಾಗಿದೆ. ಪ್ರಭಾರಿ ಡಿಸಿ ಮತ್ತು ವರ್ಗಾವಣೆಗೊಂಡಿರುವ ಡಿಸಿ ಇಬ್ಬರೂ ಒಂದೇ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಇದರಿಂದ ಕಚೇರಿಯಲ್ಲಿ ಇರುವ ಕಿರಿಯ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳಿಗೆ ದೊಡ್ಡ ಗೊಂದಲ ಶುರುವಾಗಿದೆ. ಯಾರ ಆದೇಶ ಪಾಲನೆ ಮಾಡಬೇಕು? ಇಬ್ಬರು ನಾನೇ ಡಿಸಿ ಎಂದು ಕಚೇರಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಸಿಬ್ಬಂದಿ ಗೊಂದಲದಲ್ಲಿದ್ದಾರೆ. ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಇದೊಂದು ಆದಾಯ ಬರುವ ಇಲಾಖೆಯಾಗಿದ್ದರಿಂದ ಅಷ್ಟು ಸುಲಭವಾಗಿ ಡಿಸಿ ಕುರ್ಚಿ ಬಿಟ್ಟು ಹೋಗಲು ರೂಪಾ ಅವರ ಸಿದ್ಧರಿಲ್ಲ.
ಸದ್ಯ ಇಬ್ಬರು ಡಿಸಿಗಳು ಕಚೇರಿಯಲ್ಲಿ ಓಡಾಡಿಕೊಂಡು ಇದ್ದಾರೆ. ಪ್ರಭಾರಿ ಡಿಸಿ ಕಚೇರಿ ವಾಹನ ಬಳಸಿಕೊಂಡರೆ, ವರ್ಗಾವಣೆಯಾದ ಡಿಸಿ ರೂಪಾ ಆಫೀಸ್ ಸಿಮ್ ಬಳಸುತ್ತಿದ್ದಾರೆ. ಇಬ್ಬರು ಡಿಸಿಗಳಿರುವುದಿರಂದ ಸಿಬ್ಬಂದಿ ಯಾರ ಆದೇಶ ಪಾಲಿಸಬೇಕೆನ್ನುವ ಗೊಂದಲಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.
ರಾಜಕೀಯ ಪ್ರಭಾವದಿಂದ ಶಿವಮೊಗ್ಗ ಡಿಸಿ ಆಗಿಯೇ ಮುಂದುವರೆಯುವದಕ್ಕೆ ರೂಪಾ ಪ್ರಯತ್ನದಲ್ಲಿದ್ದರೆ, ಮತ್ತೊಂದಡೆ ಪ್ರಭಾರಿ ಆಗಿ ಬಂದಿರುವ ಡಿಸಿ ಅವರು ಇಲ್ಲಿಯೇ ಮುಂದುವರಿಯುವುದಕ್ಕೆ ಪಟ್ಟು ಹಿಡಿದಿದ್ದಾರೆ. ಒಂದೇ ಹುದ್ದೆಗೆ ಇಬ್ಬರು ಡಿಸಿಗಳ ಕಿತ್ತಾಟಕ್ಕೆ ಸರ್ಕಾರವು ಆದಷ್ಟು ಬೇಗ ತೆರೆ ಎಳೆಯಬೇಕಿದೆ.