ಉಡುಪಿ: ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಆದರೆ ಉಡುಪಿಯ ಇತಿಹಾಸ ಪ್ರಸಿದ್ಧ ದೇಗುಲ ಇದೀಗ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ.
ಉಡುಪಿಯ ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಈಗ ವೈಷ್ಣವರು ಮತ್ತು ಶೈವರ ಕಿತ್ತಾಟಕ್ಕೆ ಕಾರಣವಾಗಿದೆ. ದೇಗುಲದ ಹೊರಗೆ ಅನಂತೇಶ್ವರ ದೇಗುಲ ಎಂದು ಬೋರ್ಡ್ ಇದ್ದರೆ, ಒಳಗೆ ಅನಂತಾಸನ ದೇಗುಲ ಎಂಬ ಬೋರ್ಡ್ ಇದೆ. ಅನಂತೇಶ್ವರ ಅಂದರೆ ಶಿವ. ಅನಂತಾಸನ ಅಂದರೆ ವಿಷ್ಣು. ಹೀಗಾಗಿ ಗರ್ಭಗುಡಿಯಲ್ಲಿರೋದು ಶಿವನ ವಿಗ್ರಹ ಅಂತಾ ಶೈವರು ವಾದಿಸಿದರೆ, ವೈಷ್ಣವರು ವಿಷ್ಣು ವಿಗ್ರಹ ಎಂದು ಹೇಳುತ್ತಿದ್ದಾರೆ.
800 ವರ್ಷಗಳ ಹಿಂದೆ ತುಳುನಾಡು ಸೃಷ್ಟಿಸಿದ ಪರಶುರಾಮರನ್ನು ಲಿಂಗರೂಪಿಯಾಗಿ ರಜತಪೀಠದಲ್ಲಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಲಾಗಿತ್ತು. ನಂತರದಲ್ಲಿ ಮಧ್ವಾಚಾರ್ಯರ ತಂದೆ-ತಾಯಿ ಈ ದೇವಸ್ಥಾನದಲ್ಲಿ ವಿಷ್ಣುವಿನ ಸಾನಿಧ್ಯವಿದೆ ಎಂದು ಪೂಜೆ ಮಾಡಿದ್ದರು. ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರೂ ಅದನ್ನೇ ಮುಂದುವರೆಸಿದ್ದರು.
ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ದೇವಸ್ಥಾನದ ಆಡಳಿತ ಮುಕ್ತೇಸರರಾಗಿರುವುದರಿಂದ ಪುತ್ತಿಗೆ ಶ್ರೀಗಳಿಗೆ ಈ ವಿವಾದ ಸುತ್ತಿಕೊಂಡಿದೆ.