ಮಂಡ್ಯ: ಅಂಗನವಾಡಿಯಲ್ಲಿ ಚುಚ್ಚುಮದ್ದು ಕೊಡಿಸಿದ ನಂತರ ಮಂಡ್ಯದಲ್ಲಿ ಎರಡು ತಿಂಗಳ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಸಂತೋಷ್ ಮತ್ತು ಹೇಮಾ ದಂಪತಿಯ ಎರಡು ತಿಂಗಳ ಮಗು ಮೃತಪಟ್ಟಿದೆ. ಸಂತೋಷ್ ಮತ್ತು ಹೇಮಾ ದಂಪತಿ ಹೇಳುವ ಪ್ರಕಾರ ಕಳೆದ ಗುರುವಾರ ಅಂಗನವಾಡಿಯಲ್ಲಿ ಮಗುವಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಇಂಜೆಕ್ಷನ್ ಕೊಟ್ಟ ನಂತರ ಮಗು ಅಸ್ವಸ್ಥಗೊಂಡಿತ್ತು. ಹೀಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಕಳೆದ ಗುರುವಾರ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿದ ನಂತರ ಎರಡು ಹಸುಗೂಸುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಮಗು ಮೃತಪಟ್ಟಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಹನುಮಂತ ಪ್ರಸಾದ್, ಮಗುವಿಗೆ ಪೆಂಟಾವೇಲೆಂಟ್ ಚುಚ್ಚುಮದ್ದು ನೀಡಿರಲಿಲ್ಲ. ಮಗು ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿತ್ತು. ಅಂಗನವಾಡಿಯ ಲಸಿಕೆಗೂ ಮಗುವಿನ ಸಾವಿಗೂ ಸಂಬಂಧವಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡಬಾರದು ಎಂದು ಹೇಳುತ್ತಿದ್ದಾರೆ.