ಛತ್ತೀಸ್‍ಗಢದಲ್ಲಿ ಐಇಡಿ ಸ್ಫೋಟ- ಇಬ್ಬರು ಕಾರ್ಮಿಕರ ದುರ್ಮರಣ

Public TV
1 Min Read
CHHATTISGARH IED BLAST

ರಾಯ್‍ಪುರ: ಕಬ್ಬಿಣದ ಅದಿರು ಗಣಿಯೊಂದರ ಬಳಿ ಸುಧಾರಿತ ಸ್ಫೋಟಕ (IED Blast) ಸ್ಫೋಟದಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಛತ್ತೀಸ್‍ಗಢದ (Chhattisgarh) ನಾರಾಯಣಪುರ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

ಮೃತರನ್ನು ನಾರಾಯಣಪುರದ ರಿತೇಶ್ ಗಗ್ಡಾ (21) ಮತ್ತು ಶ್ರವಣ್ ಗಗ್ಡಾ (24) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವನನ್ನು ಉಮೇಶ್ ರಾಣಾ ಎಂದು ಗುರುತಿಸಲಾಗಿದೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

ರಾಜ್ಯದ ರಾಜಧಾನಿ ರಾಯ್‍ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಆಮ್ಡೈ ಘಾಟಿ ಕಬ್ಬಿಣದ ಅದಿರು ಗಣಿಗೆ ಮೂವರು ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿನ ಸರ್ಕಾರ ಜೆಎನ್‍ಐಎಲ್ ಸಂಸ್ಥೆಗೆ ಈ ಕಬ್ಬಿಣದ ಅದಿರು ಗಣಿ ನೀಡಿದೆ. ಈ ಯೋಜನೆಗೆ ಮಾವೋವಾದಿಗಳ ವಿರೋಧವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 6 ರಂದು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಹಿಂದಿನ ದಿನ ಕಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಸಿಡಿಸಿದ ಐಇಡಿ ಸ್ಫೋಟದಲ್ಲಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಜವಾನ ಗಾಯಗೊಂಡಿದ್ದರು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಕರೆತರುತ್ತಾರೆ ಗೊತ್ತಾ? – ಪ್ರಾತ್ಯಕ್ಷಿಕೆ ವಿಡಿಯೋ ನೋಡಿ..

Share This Article