ಕಬ್ಬು ಕಟಾವು ಮಾಡುವಾಗ ಕಾಲು ಹಿಡಿದ ಚಿರತೆ ಮರಿಗಳು – ರೈತನಿಗೆ ಸಂಕಟ

ಚಾಮರಾಜನಗರ: ಕಬ್ಬು ಕಟಾವು ಮಾಡುವಾಗ ಎರಡು ಚಿರತೆ ಮರಿಗಳ ಚಿನ್ನಾಟಕ್ಕೆ ರೈತರು ಬೆಸ್ತು ಬಿದ್ದಿರುವ ಘಟನೆ ಗಡಿಭಾಗವಾದ ತಾಳವಾಡಿಯ ದೊಡ್ಡಮುತ್ತಿನಕೆರೆಯಲ್ಲಿ ನಡೆದಿದೆ.
ಗ್ರಾಮದ ತಂಗರಾಜು ಅವರು ಜಮೀನಿನಲ್ಲಿ ಚಿರತೆಯೊಂದು ಮರಿ ಹಾಕಿರುವುದು ಇಂದು ಕಟಾವು ಮಾಡುತ್ತಿರುವಾಗ ಬೆಳಕಿಗೆ ಬಂದಿದೆ. ಕಬ್ಬು ಕಟಾವು ಮಾಡುವ ವೇಳೆ ಕೆಲಸ ಮಾಡುತ್ತಿದ್ದ ಓರ್ವನ ಕಾಲನ್ನು ಚಿರತೆ ಮರಿಯೊಂದು ಹಿಡಿದು ದಂಗು ಬೀಳಿಸಿದೆ. ಬಳಿಕ ಶಾಕ್‍ನಿಂದ ಎಚ್ಚೆತ್ತ ಕೆಲಸಗಾರರು ತಾಯಿ ಇಲ್ಲದಿದ್ದನ್ನು ಖಚಿತ ಪಡಿಸಿಕೊಂಡು ಸತ್ಯಮಂಗಲಂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಎರಡು ಚಿರತೆ ಮರಿಗಳನ್ನು ಇದ್ದ ಸ್ಥಳದಲ್ಲೇ ಇರಿಸಿದ್ದು, ರಾತ್ರಿ ವೇಳೆ ತಾಯಿ ಚಿರತೆ ಬಂದು ಹೊತ್ತೊಯ್ಯಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತಿಳಿಸಿದ್ದಾರೆ. ಅವುಗಳ ಚಲನವಲನ ಗಮನಿಸಲು 3 ಕ್ಯಾಮೆರಾಗಳನ್ನು ಕೂಡ ಅರಣ್ಯ ಇಲಾಖೆ, ಸ್ಥಳದಲ್ಲಿ ಅಳವಡಿಸಿದೆ.
ಈ 2 ಚಿರತೆ ಮರಿಗಳು ಜನಿಸಿ 20 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಕಬ್ಬು ಕಟಾವು ಮಾಡುತ್ತಿದ್ದ ಸದ್ದಿಗೆ ಎಚ್ಚೆತ್ತು ಹೊರಬಂದಿವೆ ಎನ್ನಲಾಗಿದೆ.