ಧಾರವಾಡ: ಚುನಾವಣಾ ಪ್ರಚಾರಕ್ಕೆಂದು ಕಲಘಟಗಿ ತಾಲೂಕಿನ ಸಲಕಿನಕೊಪ್ಪ ಗ್ರಾಮಕ್ಕೆ ತೆರಳಿದ್ದ ವೇಳೆ ಸಾರ್ವಜನಿಕರೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.
ಅಭಿವೃದ್ಧಿ ಕಾರ್ಯ ಮಾಡದ ಸಂತೋಷ್ ಲಾಡ್ ಅವರನ್ನು ಸಾರ್ವಜನಿಕರು ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಿದ್ದಾರೆ. 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗರಡಿ ಮನೆ ವಿಚಾರವಾಗಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನಡೆದ ಕೆಲ ಅಭಿವೃದ್ಧಿ ಕಾಮಗಾರಿಗಳೂ ಕಳಪೆಯಾಗಿದ್ದು, ಗ್ರಾಮಸ್ಥರ ಪ್ರಶ್ನೆಗೆ ಲಾಡ್ ಕಂಗಾಲಾಗಿದ್ದಾರೆ. ಈ ವೇಳೆ ಲಾಡ್ ಅವರು ಗ್ರಾಮಸ್ಥರಿಗೆ ಎರಡು ಲಕ್ಷ ರೂಪಾಯಿಯ ಆಮಿಷ ಒಡ್ಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜಾರೋಷವಾಗಿ ಆಮಿಷ ಒಡ್ಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಲಾಡ್ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ಇದರಿಂದ ಕಕ್ಕಾಬಿಕ್ಕಿಯಾದ ಕಾರ್ಮಿಕ ಸಚಿವ ಜನರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಎಂದು ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.