ಬೆಂಗಳೂರು: ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವರುಣ ಆರ್ಭಟಿಸಿದ್ದು, ಮರಗಳು ಧರೆಗೆ ಉರುಳಿವೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ ಗಂಗಮ್ಮ (75) ಮೃತ ವೃದ್ಧೆ. ಗಂಗಮ್ಮ ಇಂದು ದನ ಮೇಯಿಸಲು ಹೋಗಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಶೇಡ್‍ನಲ್ಲಿ ಕುಳಿತಿದ್ದರು. ಆದರೆ ಆದರೆ ಭಾರೀ ಗಾಳಿ ಮಳೆಯಿಂದಾಗಿ ಶೆಡ್ ಕುಸಿದು ಬಿದ್ದು, ಗಂಗಮ್ಮ ಪ್ರಾಣಬಿಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿ ಹೊಸೂರಿನಲ್ಲಿ ಸಿಡಿಲು ಬಡಿದು ರೈತ ಬಸವರಾಜು (50) ಮೃತಪಟ್ಟಿದ್ದಾರೆ. ತೋಟಕ್ಕೆ ಸೌದೆ ತರಲು ಹೋಗಿದ್ದಾಗ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಹಂದನಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ, ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಮುಂಗಾರು ಆರಂಭಕ್ಕೂ ಮುನ್ನವೇ ಮಳೆಯಾಗುತ್ತಿರುವುದಕ್ಕೆ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರು ನಗರದ ಸುತ್ತಮುತ್ತ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಸಿಡಿಲು ಬಡಿದು ತೆಂಗಿನ ಮರವೊಂದು ಬೆಂಕಿ ಹೊತ್ತಿ ಉರಿದಿದೆ. ಪೆಟ್ರೋಲ್ ಬಂಕ್ ಬಳಿಯೇ ಘಟನೆ ನಡೆದಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಪಡೆದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿ ನಂದಿಸಿದೆ.
ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಲ್ಲೇಶ್ವರಂ, ರೇಸ್ ಕೋರ್ಸ್ ಸೇರಿ ಹಲವಡೆ ತುಂತುರು ಮಳೆಯಾಗಿದ್ದು, ಕಬ್ಬನ್ ಪಾರ್ಕ್, ಮೆಜೆಸ್ಟಿಕ್, ರಾಜಾಜಿನಗರದಲ್ಲಿ ಗುಡುಗುವಿನ ಶಬ್ದ ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ಕಣ್ಣಿಗೆ ಭಯ ಬೀಳಿಸುವಂತೆ ಮಿಂಚು ಕೂಡ ಅಪ್ಪಳಿಸಿದೆ. ಬಿರುಗಾಳಿ ಮಳೆಯಿಂದಾಗಿ ಕೆಲಹೊತ್ತು ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿತ್ತು.
ಹೆಬ್ಬಾಳದ ಮುಖ್ಯ ರಸ್ತೆಯಲ್ಲಿ ಮರವೊಂದು ಧರೆಗೆ ಅಪ್ಪಳಿಸಿದೆ. ದುರಾದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮಳೆಯಿಂದಾಗಿ ಹೆಬ್ಬಾಳ ರೋಡ್ ಕೆರೆಯಂತಾಗಿದೆ. ಸುಲ್ತಾನ್ ಪಾಳ್ಯ, ಸಹಕಾರ ನಗರ, ವಿದ್ಯಾರಣ್ಯಪುರದಲ್ಲಿ ಮರಗಳು ನೆಲಕ್ಕುರುಳಿವೆ.
ಬೆಂಗಳೂರು ಹೊರ ವಲಯದ ನೆಲಮಂಗಲ ತಾಲೂಕಿನಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇದರಿಂದಾಗಿ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಆಲಿಕಲ್ಲು ಮಳೆಗೆ ಮಾವು ಬೆಳೆ ನಾಶವಾಗಿದೆ.