ನವದೆಹಲಿ: ಮೂವರು ವಿದ್ಯಾರ್ಥಿನಿಯರು ಸೇರಿ ಒಟ್ಟು 5 ಮಂದಿ ಜಾಲಿ ರೈಡಿಗೆ ತರಳಿದ್ದ ಸಂದರ್ಭದಲ್ಲಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಈ ಘಟನೆ ಉತ್ತರ ದೆಹಲಿಯ ಮುಖರ್ಜಿ ನಗರದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಮೂವರು ಮಹಿಳೆಯರಿಗೂ ಗಾಯಗಳಾಗಿದ್ದು, ಕುಡಿದು ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಅಂತ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಭಾನುವಾರ ನಸುಕಿನ ಜಾವ ಸುಮಾರು 2.45ರ ಸುಮಾರಿಗೆ ಬೇರೆ ಬೇರೆ ವಿಶ್ವವಿದ್ಯಾಲಯದ 5 ಮಂದಿ ವಿದ್ಯಾರ್ಥಿಗಳು ತಮ್ಮ ಐ20 ಕಾರಿನಲ್ಲಿ ಜಾಲಿರೈಡ್ ಹೋಗಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಗುದ್ದಿದೆ. ಪರಿಣಾಮ ಜನಕ್ ಪುರಿಯ ಮಹರಾಜ ಸೂರಜ್ ಮಾಲ್ ಶಿಕ್ಷ ಸಂಸ್ಥಾನ ವಿದ್ಯಾರ್ಥಿ 20 ವರ್ಷದ ಸಿದ್ಧಾರ್ಥ್ ಹಾಗೂ ಹರಿಯಾಣದ ಸೋನಿಪತ್ ನಿವಾಸಿ 21 ವರ್ಷದ ರಿತೇಶ್ ದಾಹಿಯಾ ಮೃತಪಟ್ಟಿದ್ದಾರೆ. ರಿತೇಶ್ ದೆಹಲಿ ವಿಶ್ವವಿದ್ಯಾಲಯದ ವೆಂಕಟೇಶ್ವರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್‍ಸಿ ಅಧ್ಯಯನ ಮಾಡುತ್ತಿದ್ದರು ಎಂಬುದಾಗಿ ವರದಿಯಾಗಿದೆ.
Advertisement
ಘಟನೆಯಲ್ಲಿ ಗಾಯಗೊಂಡವರನ್ನು ದೆಹಲಿ ಮೂಲದ ದೀಕ್ಷಾ, ಮುಂಬೈಯ ಜೋಷಿತಾ ಮೊಹಾಂತಿ ಹಾಗೂ ಮೀರತ್ ನ ರಾಶಿ ಶರ್ಮಾ ಎಂದು ಗುರುತಿಸಲಾಗಿದ್ದು, ಈ ಮೂವರೂ ನೊಯ್ಡಾದ ಅಮಿತಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಲ್ ಎಲ್ ಬಿ ಓದುತ್ತಿದ್ದಾರೆ ಎನ್ನಲಾಗಿದೆ.
Advertisement
ಮುಖರ್ಜಿ ನಗರದ ಹಡ್ಸನ್ ಕೇಂದ್ರದಲ್ಲಿ ಕಾರ್ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಟಿವೈಡರ್ ಗೆ ಗುದ್ದಿದೆ. ಪರಿಣಾಮ ಕಾರು ಪಲ್ಟಿಯಾಗಿ ಕೆಲ ಮೀಟರ್ ಗಳಷ್ಟು ದೂರ ಉರುಳಿ ಬಿದ್ದಿದೆ ಅಂತ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಅಪಘಾತವಾಗುವ ಸಂದರ್ಭದಲ್ಲಿ ದೀಕ್ಷಾ ಎಂಬಾಕೆ ಕಾರು ಚಲಾಯಿಸುತ್ತಿದ್ದರು. ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ ಅಂತ ಅಲ್ಲಿನ ಡಿಸಿಪಿ ಅಸ್ಲಾಮ್ ಖಾನ್ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರಾದ ದೀಕ್ಷಾ ಹಾಗೂ ರಾಶಿ ಶರ್ಮಾ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಪಘಾತದ ರಭಸಕ್ಕೆ ಕಾರೊಳಗಡೆ ಯುವಕರ ಮೃತದೇಹ ಅಪ್ಪಚ್ಚಿಯಾಗಿದ್ದು, ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ರಾಶಿ ಶರ್ಮಾ ಅವರ ಕುತ್ತಿಗೆಯ ಎಲುಬು ಮುರಿತಗೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ದೀಕ್ಷಾ ಹಾಗೂ ಮೊಹಾಂತಿ ಅಪಾಯದಿಂದ ಪಾರಾಗಿದ್ದು, ಇವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ದೀಕ್ಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಅಜಾಗರೂಕತೆ ಹಾಗೂ ಅತಿವೇಗ ಚಾಲನೆ ಮಾಡಿದ್ದಾರೆಂದು ಮುಖರ್ಜಿ ನಗರ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.