ತಿರುವನಂತಪುರಂ: ಮಹಿಳೆ ಹಾಗೂ ಆಕೆಯ 17 ದಿನದ ಅವಳಿ ಮಕ್ಕಳನ್ನು ಕೊಲೆಗೈದು 19 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದಿಬಿಲ್ ಕುಮಾರ್ ಬಿ ಹಾಗೂ ರಾಜೇಶ್.ಪಿ ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 10, 2006 ರಂದು ಕೃತ್ಯ ಎಸಗಿದ್ದರು. ಪಿತೃತ್ವ ಪರೀಕ್ಷೆಯಲ್ಲಿ ಅವಳಿ ಹೆಣ್ಣುಮಕ್ಕಳ ತಂದೆ ಎಂದು ಸಾಬೀತಾಗುತ್ತದೆ ಎಂದು ಹೆದರಿ ಆರೋಪಿ ಕುಮಾರ್ ತನ್ನ ಸಹ ಸೈನಿಕನ ಸಹಾಯದಿಂದ ಅವಳನ್ನು ಮತ್ತು ಶಿಶುಗಳನ್ನು ಕೊಲೆಗೈದಿದ್ದ. ಬಳಿಕ ಇಬ್ಬರು ಸೈನ್ಯವನ್ನು ತೊರೆದಿದ್ದರು.
Advertisement
ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಬಳಿಯ ಯೆರಮ್‍ನಲ್ಲಿ ರಂಜಿನಿ (24) ಮತ್ತು ಅವಳ ನವಜಾತ ಹೆಣ್ಣುಮಕ್ಕಳನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವಳಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೋಗಿದ್ದ ರಂಜಿನಿ ಅವರ ತಾಯಿ ಪಂಚಾಯತ್ ಕಚೇರಿಯಿಂದ ಹಿಂತಿರುಗಿದಾಗ ಮನೆಯಲ್ಲಿ ಶವಗಳು ಪತ್ತೆಯಾಗಿದ್ದವು.
Advertisement
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಪಠಾಣ್‍ಕೋಟ್‍ನಲ್ಲಿ ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಚಲ್‍ನ ದಿಬಿಲ್ ಕುಮಾರ್ ಬಿ (28) ರಂಜಿನಿ ಅವರೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿತ್ತು. ಜನವರಿ 24, 2006 ರಂದು ಅವಳಿ ಮಕ್ಕಳು ಜನಿಸಿದ ನಂತರ, ಅವರು ಅವಳಿಂದ ದೂರವಾಗಲು ಪ್ರಾರಂಭಿಸಿದ್ದರು.
Advertisement
Advertisement
ನಂತರ ಮಹಿಳೆಯ ತಾಯಿ ಕೇರಳ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಇದು ಅವಳಿ ಮಕ್ಕಳ ಡಿಎನ್‍ಎ ಪರೀಕ್ಷೆಗೆ ಆದೇಶಿಸಿತ್ತು. ಇದರಿಂದ ಕುಮಾರ್ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಬಳಿಕ ಸೈನ್ಯದಲ್ಲಿದ್ದ ರಾಜೇಶ್.ಪಿ ಎಂಬಾತ ರಂಜಿನಿಯನ್ನು ಮದುವೆಯಾಗಲು ಕುಮಾರ್‌ಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ ಆತ ಕುಮಾರ್ ಜೊತೆ ಸೇರಿಕೊಂಡು ಹತ್ಯೆಗೆ ಕೈ ಜೋಡಿಸಿದ್ದ.
ಸ್ಥಳೀಯ ಪೊಲೀಸರು ವ್ಯಾಪಕ ತನಿಖೆ ನಡೆಸಿದರೂ ಮತ್ತು ಅವರ ಸೆರೆಗೆ ಕಾರಣವಾಗುವ ಮಾಹಿತಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡಿದ್ದರೂ ಸಹ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಕೇರಳ ಹೈಕೋರ್ಟ್‍ನ (Court) ಆದೇಶದ ಮೇರೆಗೆ 2010 ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.
ಸಿಬಿಐ (CBI) ತನಿಖೆ ವೇಳೆ ಕುಮಾರ್ ಮತ್ತು ರಾಜೇಶ್ ಪುದುಚೇರಿಯಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿತ್ತು. ಅಲ್ಲದೇ ಇಬ್ಬರು ಶಿಕ್ಷಕಿಯರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿತ್ತು.
ಸಿಬಿಐನ ಚೆನ್ನೈ ಘಟಕವು ಶುಕ್ರವಾರ ಇಬ್ಬರನ್ನು ಬಂಧಿಸಿ ಕೊಚ್ಚಿಗೆ ಕರೆತಂದಿದೆ. ಅಲ್ಲಿ ಅವರನ್ನು ಶನಿವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಜ.18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.