ಬೆಳಗಾವಿ/ಹಾವೇರಿ/ಚಿಕ್ಕಬಳ್ಳಾಪುರ: ಒಂದೇ ದಿನದಲ್ಲಿ ಮೂರು ಕಡೆ ಪ್ರತ್ಯೇಕ ರೈಲು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ರೈಲ್ವೇ ನಿಲ್ದಾಣದ ಓವರ್ ಬ್ರಿಡ್ಜ್ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಲು ಹೋಗಿ ವಿಫಲವಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Advertisement
ಲಕ್ಷ್ಮಣ ವಡ್ಡರಗಾವಿ(40) ಚಿಕಿತ್ಸೆ ಫಲಿಸದೇ ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ ಮಿರಜ್ ನಿಂದ ಬೆಳಗಾವಿ ಕಡೆಗೆ ಹೊರಟಿದ್ದ ರೈಲಿನಡಿ ಬಿದ್ದು ಲಕ್ಷ್ಮಣ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ರೈಲ್ವೇ ಚಾಲಕನ ಸಮಯ ಪ್ರಜ್ಞೆಯಿಂದ ಲಕ್ಷ್ಮಣನ ಸಾವು ತಪ್ಪಿತ್ತು. ಇದೇ ವೇಳೆ ರೈಲ್ವೇ ಇಂಜಿನ್ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಮೃತ ವ್ಯಕ್ತಿ ಗೋಕಾಕ ಸಮೀಪದ ಮಾಲದಿನ್ನಿ ಗ್ರಾಮದ ನಿವಾಸಿಯಾಗಿದ್ದು, ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಬಳಿ ರೈಲ್ವೆ ಹಳಿಗೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ವಿಠೋಬ ಮಾಂಗ್ಲೇನವರ(19) ಎಂದು ಗುರುತಿಸಲಾಗಿದೆ. ವಿಠೋಬ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮ ತೀರ್ಥಹೊಸಕೊಪ್ಪ ಗ್ರಾಮದ ನಿವಾಸಿಯಾಗಿದ್ದು, ರೈಲ್ವೇ ಹಳಿಗೆ ಬಿದ್ದಿದ್ದರಿಂದ ಆತನ ರುಂಡ ಮತ್ತು ದೇಹ ಬೇರೆ ಬೇರೆಯಾಗಿ ಬಿದ್ದಿದೆ. ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಇತ್ತ ಚಿಕ್ಕಬಳ್ಳಾಪುರದ ಚಿಂತಾಮಣಿಯ ಅಮಿಟಾಗಾನಹಳ್ಳಿ ಬಳಿ ರೈಲಿಗೆ ಸಿಲುಕಿ ಅಪರಿಚಿತ ಮಹಿಳೆಯ ಎಡಗೈ ತುಂಡಾಗಿ ಅದು ನಾಯಿಗಳ ಪಾಲಾಗಿರುವ ದಾರುಣ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv