ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಕ್ಟೋಬರ್ 22 ಹಾಗೂ 23 ರಂದು 2 ದಿನಗಳ ಕಾಲ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹೊಯ್ಸಳ ಸಾಹಿತ್ಯೋತ್ಸವ-2022 (Hoysala Sahityotsava) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2 ದಿನಗಳ ಕಾಲ ನಡೆಯುವ ಹೊಯ್ಸಳ ಸಾಹಿತ್ಯೋತ್ಸವವನ್ನು ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ (SL Bhyrappa) ಉದ್ಘಾಟಿಸಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ (Chandrashekhara Kambara) ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಆಶಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ನಾಡಿನ ಹೆಸರಾಂತ ಕವಿಗಳಾದ ಡಾ. ದೊಡ್ಡರಂಗೇಗೌಡ, ಬಿ.ಆರ್.ಲಕ್ಷ್ಮಣರಾವ್, ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್, ಗಿರೀಶ್ ರಾವ್ ಹತ್ವಾರ್ (ಜೋಗಿ) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
Advertisement
Advertisement
ಮೊದಲ ದಿನ ಸಂಜೆ 6 ರಿಂದ 7 ರವರೆಗೆ ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಸಂವಾದ ನಡೆಯಲಿದ್ದು, ಡಾ. ಪ್ರಧಾನ ಗುರುದತ್ ನಿರ್ವಹಣೆ ಮಾಡಲಿದ್ದಾರೆ. ವಿಜಯ ಹರನ್, ಜೆ.ಜಿ.ರಂಗಸ್ವಾಮಿ, ಸಹನಾ ವಿಜಯಕುಮಾರ್ ಸಂವಾದಕರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಂಭ ಕಳಶ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ
Advertisement
ಅಕ್ಟೋಬರ್ 23 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಸಮಾರೋಪ ನುಡಿಗಳನ್ನಾಡಲಿದ್ದು, ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಗಿರೀಶ್ ರಾವ್ ಹತ್ವಾರ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
Advertisement
2 ದಿನ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟು 8 ಸಾಹಿತ್ಯದ ಗೋಷ್ಠಿಗಳು ನಡೆಯಲಿವೆ. 70 ಕ್ಕೂ ಹೆಚ್ಚು ನಾಡಿನ ಹೆಸರಾಂತ ಹಿರಿಯ ಸಾಹಿತಿಗಳು, ಲೇಖಕರು, ವಿಮರ್ಶಕರು, ಯುವ ಬರಹಗಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೊರ ಜಿಲ್ಲೆಯ ನೋಂದಾಯಿತ 200 ಹಾಗೂ ಜಿಲ್ಲೆಯ ನೋಂದಾಯಿತ 600 ಮಂದಿಗಷ್ಟೇ ಪಾಲ್ಗೊಳ್ಳಲು ಅವಕಾಶವಿದ್ದು, 250 ರೂ. ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ಹೊರ ಜಿಲ್ಲೆಯವರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ 2 ದಿನಗಳ ಕಾಲ ಬೆಳಗ್ಗೆ ಉಪಾಹಾರದ ವ್ಯವಸ್ಥೆ, ಮಧ್ಯಾಹ್ನ ಊಟ ಹಾಗೂ ಚಹಾ ವ್ಯವಸ್ಥೆಯನ್ನು ಪರಿಷತ್ತಿನ ವತಿಯಿಂದ ಮಾಡಲಾಗಿದೆ ಎಂದರು.
ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡಲಾಗುತ್ತಿದ್ದು, ಜಿಲ್ಲೆಯ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕನ್ನಡ ಭಾಷೆಯ ಪದವಿ ವಿದ್ಯಾರ್ಥಿಗಳು, ಬಿ.ಎಡ್ ವಿದ್ಯಾರ್ಥಿಗಳು, ಪತ್ರಿಕೋದ್ಯಮದ ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯಾವುದೇ ನೋಂದಣಿ ಶುಲ್ಕವಿಲ್ಲದೆ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು. ಇದನ್ನೂ ಓದಿ: ದಸರಾ ರಜೆಯಲ್ಲಿ ಶಿಕ್ಷಕನಿಂದ ಶಾಲಾ ಆವರಣದಲ್ಲಿ ಅರಳಿದ ಕಲಾಕೃತಿಗಳು- ಗ್ರಾಮಸ್ಥರ ಮೆಚ್ಚುಗೆ
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಪ್ರಸನ್ನಕುಮಾರ್, ಗೌರವ ಕೋಶಾಧ್ಯಕ್ಷ ಬಿ.ಎನ್.ಜಯರಾಂ, ಚನ್ನರಾಯಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್.ಲೋಕೇಶ್, ಸಕಲೇಶಪುರ ತಾಲೂಕಿನ ಶಾರದಾ ಗುರುಮೂರ್ತಿ, ಹೊಳೆನರಸೀಪುರದ ಪುಟ್ಟೇಗೌಡ, ಆಲೂರಿನ ಗೋಪಾಲಕೃಷ್ಣ, ಹಾಸನ ತಾಲೂಕು ಕಸಾಪ ಅಧ್ಯಕ್ಷ ಮಮತೇಶ್, ಜಿಲ್ಲಾ ಪದಾಧಿಕಾರಿ ಕೆ.ಜಿ.ಸುರೇಶ್ ಹಾಜರಿದ್ದರು.