ಬೆಂಗಳೂರು/ಕೋಲಾರ: ಸಿಲಿಕಾನ್ ಸಿಟಿ ಬುಧವಾರ ಮಧ್ಯಾಹ್ನ ಮಳೆಯ ಆರ್ಭಟ ಜೋರಾಗಿದ್ದು, ಇನ್ನು ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಪ್ರಕೃತಿ ಮತ್ತು ನೈಸರ್ಗಿಕ ವಿಕೋಪ ಇಲಾಖೆಯ ವಿಜ್ಞಾನಿ ಗವಾಸ್ಕರ್ ಮಾಹಿತಿ ನೀಡಿದ್ದಾರೆ.
ಯಶವಂತಪುರ, ಮಲ್ಲೇಶ್ವರಂ, ಗೊರಗುಂಟೆ ಪಾಳ್ಯ, ಕಮ್ಮನಹಳ್ಳಿ, ನಾಗಾವರ, ವಿದ್ಯಾರಣ್ಯಪುರ, ಕನ್ನಿಂಗ್ ಹ್ಯಾಮ್ ರಸ್ತೆ ಸೇರಿದಂತೆ ನಗರದ ಹಲವೆಡೆ ಮಳೆ ಆಗುತ್ತಿದೆ. ಕಳೆದ ಸೋಮವಾರ ಸುರಿದು ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ಮತ್ತೆ ಇಂದು ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಪೂರ್ವ ಮಳೆ ಆಗಲಿದೆ. ರಾಮನಗರ, ಮಂಡ್ಯ, ಮೈಸೂರು, ಕರಾವಳಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ ಆಗಲಿದೆ. ಯಾವುದೇ ವಾಯುಭಾರ ಅಥವಾ ಮೇಲ್ಮೈ ಸುಳಿಗಾಳಿಯಿಂದ ಆಗುತ್ತಿರುವ ಮಳೆಯಲ್ಲ. ಕಾಲಕ್ಕೆ ಸರಿಯಾಗಿ ಆಗುತ್ತಿರುವ ಪೂರ್ವ ಮುಂಗಾರು ಮಳೆ ಎಂದು ಪಬ್ಲಿಕ್ ಟಿವಿಗೆ ಪ್ರಕೃತಿ ಮತ್ತು ನೈಸರ್ಗಿಕ ವಿಕೋಪ ಇಲಾಖೆಯ ವಿಜ್ಞಾನಿ ಗವಾಸ್ಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಅಲ್ಲದೆ ಕೋಲಾರ ಜಿಲ್ಲೆಯಲ್ಲೂ ಹಲವೆಡೆ ಆಲಿಕಲ್ಲು ಸಹಿತ ಜೋರು ಮಳೆ ಆಗಿದೆ. ಜಿಲ್ಲೆಯ ಹಲವೆಡೆ ಉತ್ತಮ ಮಳೆ ಆಗಿದ್ದು, ಉತ್ತಮ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆ ಆರಂಭಗೊಳ್ಳುತ್ತಿದೆ.
ಇಂದು ಮಧ್ಯಾಹ್ನದ ಮಳೆಯಿಂದ ಜನರು ಖುಷಿಯಾಗಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಕೊಡೆಗಳ ಮೊರೆ ಹೋಗಿದ್ದಾರೆ. ಮಧ್ಯಾಹ್ನ ಗುಡುಗು, ಬಿರುಗಾಳಿ ಆಲಿಕಲ್ಲು ಸಹಿತ ಅರ್ಧ ಗಂಟೆ ಜೋರು ಮಳೆ ಆಗಿದ್ದು, ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದ ಚುಕ್ಕಿ ಮೇಳದಲ್ಲಿ ಮಕ್ಕಳು ಆಲಿಕಲ್ಲು ಹಿಡಿದು ಸಂತಸ ಪಟ್ಟಿದ್ದಾರೆ.