ರಾಯಚೂರು: ವಸತಿ ನಿಲಯಗಳಿಗೆ ಸರಬರಾಜು ಮಾಡಿದ ಆಹಾರ ಪದಾರ್ಥಗಳ 2 ಕೋಟಿ ರೂ. ಬಿಲ್ ಪಾವತಿಸದ ಹಿನ್ನೆಲೆ ರಾಯಚೂರಿನ (Raichuru) ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಲಾಗಿದೆ.
ರಾಯಚೂರು ತಾಲೂಕಿನ ವಸತಿ ನಿಲಯಗಳ ಆಹಾರ ಸಾಮಗ್ರಿ ಸರಬರಾಜು ಸುಮಾರು 2 ಕೋಟಿ ರೂ. ಬಿಲ್ ಪಾವತಿಸದ ಹಿನ್ನೆಲೆ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಪದ್ಮಾವತಿ ಎಂಟರ್ಪ್ರೈಸಸ್ ಮಾಲೀಕ ಮತಿ ಸಾಗರ್ ಅವರು ನ್ಯಾಯಾಲಯ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಬಾಕಿ ಬಿಲ್ ಪಾವತಿಸುವಂತೆ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿದ್ದು, ಇದೀಗ ಕಚೇರಿ ವಸ್ತುಗಳ ಜಪ್ತಿಗೆ ಆದೇಶ ನೀಡಿದೆ. ಅದರಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಜ.20, 21ರಂದು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ: ಬಿಜೆಪಿ-ಕಾಂಗ್ರೆಸ್ ನಡುವೆ ರಣರಂಗ?
2019-20 ಹಾಗೂ 2024-25ರ ಅವಧಿಯಲ್ಲಿ ಸರಬರಾಜು ಮಾಡಿದ ಆಹಾರ ಪದಾರ್ಥಗಳ ಹಣ ಪಾವತಿ ಮಾಡಿಲ್ಲ. ಎರಡು ಪ್ರಕರಣಗಳ ಬಾಕಿ 16,91,902 ರೂ. ಹಾಗೂ 1,87,46,937 ರೂ. ಪಾವತಿಗೆ ಕೋರ್ಟ್ ಆದೇಶ ನೀಡಿತ್ತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆ ಕೋರ್ಟ್ ಜಪ್ತಿಗೆ ಆದೇಶ ನೀಡಿದೆ. ಈ ಹಿನ್ನೆಲೆ ಕೋರ್ಟ್ ಸಿಬ್ಬಂದಿ ಸಮ್ಮುಖದಲ್ಲಿ ಕಚೇರಿ ಪೀಠೋಪಕರಣ ಹಾಗೂ ಇತರ ಸಾಮಗ್ರಿಗಳನ್ನ ವಶಕ್ಕೆ ಪಡೆಯಲಾಗಿದೆ.

