ಬೆಳಗಾವಿ: ಒಂದು ಕಡೆ ಮಳೆ ಇಲ್ಲದೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಈಗ ಬರದ ಜೊತೆಗೆ ಈ ಭಾಗದಲ್ಲಿ ಡೆಂಗ್ಯೂ ರೋಗ ತಾಂಡವವಾಡುತ್ತಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಡೆಂಗ್ಯೂ ರೋಗದಿಂದ ಇಬ್ಬರು ಮಕ್ಕಳು ಹಾಗೂ ಓರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಮಂದಿ ಪಕ್ಕದ ಮಹಾರಾಷ್ಟ್ರದ ಮೀರಜ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೇಜಲ ಸಂಗಪ್ಪ ರೇವಾಗೋಳ (9), ಅಂಕಿತಾ ಅನಿಲ್ ಮಠಪತಿ (5) ಹಾಗೂ ಧರೆಪ್ಪ ಎಂಬವರು ಡೆಂಗ್ಯೂ ರೋಗಕ್ಕೆ ಬಲಿಯಾಗಿದ್ದಾರೆ. ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದಲೇ ಈ ಭಾಗದಲ್ಲಿ ಡೆಂಗ್ಯೂ ತಾಂಡವವಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸುಪ್ರಸಿದ್ಧ ಖಿಳೇ ಗಾಂವ ಬಸವಣ್ಣ ದೇವಸ್ಥಾನ ಹೊಂದಿರುವ ಈ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಈಗಲಾದರೂ ಡೆಂಗ್ಯೂ ಇಲ್ಲಾ ಎನ್ನುವ ಮೊಂಡು ವಾದವನ್ನು ಬಿಟ್ಟು ಈ ಭಾಗದಲ್ಲಿ ಡೆಂಗ್ಯೂ ರೋಗ ಇನ್ನಷ್ಟು ಜನರನ್ನು ಬಲಿ ತೆಗೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ.