ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಕಲಬೆರಿಕೆ ಸಿಎಚ್ ಪೌಡರ್ ಸೇಂದಿಗೆ ಚಿಕ್ಕಮಕ್ಕಳು ದಾಸರಾಗಿ ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡಿದ ಕುರಿತ ಪಬ್ಲಿಕ್ ಟಿವಿ ವರದಿಯಿಂದ ರೈಲ್ವೇ ಪೊಲೀಸರು ಎಚ್ಚೆತ್ತಿದ್ದಾರೆ.
ಕುಡಿತಕ್ಕೆ ದಾಸರಾದ ಇಬ್ಬರು ಬಾಲಕರನ್ನ ರಕ್ಷಿಸಿದ್ದು, ಓರ್ವನನ್ನ ಸರ್ಕಾರಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವನನ್ನ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.
ಒಟ್ಟು ನಾಲ್ಕು ಮಕ್ಕಳು ತೆಲಂಗಾಣಕ್ಕೆ ತೆರಳಿ ಸಿಎಚ್ ಪೌಡರ್ ಸೇಂದಿ ಕುಡಿದು ಬಾಟಲ್‍ಗಳನ್ನ ತಂದಿದ್ದರು. ರಾಯಚೂರು ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡುತ್ತಿದ್ದ ವಿಷ್ಯೂವಲ್ಸ್ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೇ ಪೊಲೀಸರು ಇಬ್ಬರು ಮಕ್ಕಳನ್ನ ರಕ್ಷಿಸುವ ಜೊತೆ ಓರ್ವ ಅಕ್ರಮ ಸಿಎಚ್ ಪೌಡರ್ ಸಾಗಣೆಗಾರನನ್ನೂ ಬಂಧಿಸಿದ್ದಾರೆ.
ರಾಯಚೂರಿನ ರಾಗಿಮಾನಗಡ್ಡದ ನಿವಾಸಿ ವಿರೇಶ್ ಬಂಧಿತ ಆರೋಪಿ. ತೆಲಂಗಾಣದ ಕೃಷ್ಣದಿಂದ 25 ಲೀಟರ್ ಸೆಂದಿಯನ್ನ ಸಾಗಣೆ ಮಾಡುತ್ತಿದ್ದ ವೇಳೆ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.