ಕಾರವಾರ: ಐಎನ್ಎಸ್ ಕದಂಬ ನೌಕಾ ನೆಲೆಯ (Karwar Naval Base) ಮಾಹಿತಿಗಳನ್ನು ಪಾಕಿಸ್ತಾನದ (Pakistan) ಏಜೆಂಟ್ ಜೊತೆ ಹಂಚಿಕೊಂಡ ಆರೋಪದ ಮೇಲೆ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ದಳ (NIA) ತಂಡ ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಕಾರವಾರ ತಾಲೂಕಿನ ಮುದುಗಾದ ವೇತನ್ ತಾಂಡೇಲ್, ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂದು ಗುರುತಿಸಲಾಗಿದೆ. ಆರೋಪಿಗಳು 2023ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಪಾಕ್‌ನ ಏಜೆಂಟ್ ಮಹಿಳೆ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಆಕೆ ತಾನು ನೌಕಾದಳದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನೌಕಾದಳದ ನೌಕೆಗಳು, ಅದರ ಚಲನವಲನ, ನೌಕೆಗಳ ಚಿತ್ರಗಳು, ಕದಂಬ ನೌಕಾದಳದ ಸ್ಥಳಗಳ ಮಾಹಿತಿ ಪಡೆದಿದ್ದಳು ಎಂದು ತಿಳಿದು ಬಂದಿದೆ.
ಇದಕ್ಕಾಗಿ ಪ್ರತಿ ತಿಂಗಳು 5,000 ರೂ. ನಂತೆ ಎಂಟು ತಿಂಗಳ ಕಾಲ ಮೂವರ ಖಾತೆಗೆ ದೀಪಕ್ ಎನ್ನುವ ಹೆಸರಿನ ಖಾತೆಯಿಂದ ಹಣ ಕಳುಹಿಸಲಾಗುತ್ತಿತ್ತು. 2023 ರಲ್ಲಿ ಎನ್ಐಎ ತಂಡ ದೀಪಕ್ ಹಾಗೂ ಆತನ ತಂಡವನ್ನು ಬಂಧಿಸಿದಾಗ ಕಾರವಾರದ ಮೂವರು ಮಾಹಿತಿ ನೀಡುತ್ತಿದ್ದ ಹಾಗೂ ನೌಕಾದಳದ ಅಧಿಕಾರಿಗಳು ಹನಿಟ್ರ್ಯಾಪ್‌ಗೆ ಒಳಗಾದ ಕುರಿತು ಮಾಹಿತಿ ದೊರೆತಿತ್ತು.
ತಕ್ಷಣ 2023ರ ಆಗಷ್ಟ್ 28 ರಂದು ಕಾರವಾರದಲ್ಲಿ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಈ ಮೂವರನ್ನು ವಶಕ್ಕೆ ಪಡೆದು, ಇವರ ಬಳಿ ಇದ್ದ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ವಶಕ್ಕೆ ಪಡೆದು ತನಿಖೆಗೆ ಹಾಜರಾಗುವಂತೆ ಎನ್‌ಐಎ ನೋಟಿಸ್ ಜಾರಿ ಮಾಡಿತ್ತು.
ಇದರ ನಂತರ ಇದೇ ಪ್ರಕರಣದಲ್ಲಿ ತನಿಖೆ ಮುಂದುವರೆಸಿದ್ದ ಹೈದರಾಬಾದ್ ಹಾಗೂ ಬೆಂಗಳೂರು ಎನ್ಐಎ ತಂಡ ಇದೀಗ ಇಬ್ಬರನ್ನು ಬಂಧಿಸಿದೆ. ಆರೋಪಿಗಳನ್ನು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜುರು ಪಡಿಸಿ ಹೆಚ್ಚಿನ ತನಿಖೆಗಾಗಿ ಹೈದರಾಬಾದ್ ಅಥವಾ ದೆಹಲಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.
ಮೂರು ಜನರ ಮೇಲೆ ಇರುವ ಆರೋಪ ಏನು?: ಕಾರವಾರದ ಚೆಂಡಿಯಾದಲ್ಲಿ ಇರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಂಪನಿ ಕದಂಬ ನೌಕಾನೆಲೆಯಲ್ಲಿ ಯುದ್ದ ನೌಕೆಗಳ ರಿಪೇರಿ ಕಾರ್ಯವನ್ನು ನಡೆಸುತ್ತದೆ. ತೋಡೂರಿನ ಸುನಿಲ್, ಕದಂಬ ನೌಕಾನೆಲೆಯ ನೇವಿ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತಿದ್ದು, ನಂತರ ಚಾಲಕ ವೃತ್ತಿ ಮಾಡುತಿದ್ದ.
2023 ರಲ್ಲಿ ಪಾಕಿಸ್ತಾನದ ಮಹಿಳಾ ಏಜೆಂಟ್ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ನಂತರ, ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಈ ಮಹಿಳೆಗೆ ಹತ್ತಿರವಾಗಿದ್ದರು.
ಈ ಮಹಿಳೆ ದೀಪಕ್ ಎಂಬುವವನನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಇವರಿಗೆ ಮಾಹಿತಿ ನೀಡುವುದಕ್ಕಾಗಿ ತಲಾ 5 ಸಾವಿರ ರೂ. ಹಣ ಸಂದಾಯ ಮಾಡುತಿದ್ದಳು. ದೀಪಕ್ ಬಂಧನವಾಗುತಿದ್ದಂತೆ ಸುನಿಲ್ ಮೂರು ವರ್ಷಗಳ ಹಿಂದೆ ನೌಕಾ ನೆಲೆಯಲ್ಲಿ ತನ್ನ ಕೆಲಸವನ್ನು ಬಿಟ್ಟು ಗೋವಾದ ರೆಸ್ಟೋರೆಂಟ್‌ಗೆ ಸೇರಿಕೊಂಡಿದ್ದ. ಇನ್ನೂ ವೇತನ್ ತಾಂಡೇಲ್ ಕೆಲಸ ಬಿಟ್ಟರೂ ನೌಕಾ ನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ನೌಕಾನೆಲೆಯ ಮಾಹಿತಿ ಪಡೆದು ಪಾಕಿಸ್ತಾನದ ಏಜೆಂಟ್‌ಗೆ ಕಳುಹಿಸುತಿದ್ದ.
ಮೊಬೈಲ್, ಎಲಕ್ಟಾನಿಕ್ ಗ್ಯಾಜೆಟ್‌ನಲ್ಲಿತ್ತು ಮಾಹಿತಿ: ವಶಪಡಿಸಿಕೊಂಡ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳ ಶೋಧ ನಡೆಸಿದ ಎನ್ಐಎ ತಂಡಕ್ಕೆ ನೌಕಾದಳದ ಅಧಿಕಾರಿಗಳು, ನೌಕಾನೆಲೆಯ ನೌಕೆಯಲ್ಲಿ ತಾಂತ್ರಿಕ ತಜ್ಞರಾಗಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರರ ಸಂಪರ್ಕ ಹೊಂದಿದ್ದ ಮಾಹಿತಿ ಹೊರಬಿದ್ದಿದೆ. ಇದಲ್ಲದೇ ನೌಕಾದಳದ ಅಧಿಕಾರಿಗಳು ಹನಿಟ್ರ್ಯಾಪ್ ಆಗಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಸಹ ತನಿಖೆ ಕೈಗೊಳ್ಳಲಾಗಿದೆ.