ವಿಜಯಪುರ: ಕೊರೊನಾ ವಿಜಯಪುರ ಜಿಲ್ಲೆಯಲ್ಲಿ ರುದ್ರತಾಂಡವ ಆಡುತ್ತಿದೆ. ಇದನ್ನೇ ಲಾಭ ಪಡೆಯಲು ಮುಂದಾಗಿರುವ ಕೆಲ ಖಾಸಗಿ ಆಸ್ಪತ್ರೆಗಳು ಇದೀಗ ಬಡವರ ಹಣ ಪೀಕಲು ಮುಂದಾಗಿವೆ.
ರಾಜು ಬುವಿ ಎಂಬವರು 18 ದಿನಗಳ ಹಿಂದೆ ಕೊವಿಡ್ 19 ಸೋಂಕಿನಿಂದ ನಗರದ ಕೋಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತ ಪಟ್ಟಿದ್ದಾರೆ. ಆಸ್ಪತ್ರೆಗೆ ಇಲ್ಲಿವರೆಗೆ 4.80 ಲಕ್ಷ ರೂ ಕುಟುಂಬಸ್ಥರು ಬಿಲ್ ಪಾವತಿಸಿದ್ದಾರೆ.
2.70 ಲಕ್ಷ ರೂ. ಮತ್ತೆ ಹಣ ಕಟ್ಟಿ ಶವ ಒಯ್ಯುವಂತೆ ಆಸ್ಪತ್ರೆ ವೈದ್ಯರು ಸೂಚಿಸಿದ್ದಾರಂತೆ. ಅಲ್ಲದೆ ಹಣ ಕಟ್ಟುವವರೆಗೆ ಶವ ನೋಡಲೂ ವೈದ್ಯರು ಮೃತನ ಪತ್ನಿಗೆ ಬಿಡದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನ ವಿರೋಧಿಸಿ ಆಸ್ಪತ್ರೆ ಎದುರು ಕುಟುಂಬಸ್ಥರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಸ್ಥಳದಲ್ಲೇ ಭಿಕ್ಷೆ ಬೇಡಿ ಹಣ ಜಮಾಯಿಸಿ ಶವ ಪಡೆಯಲು ಮುಂದಾಗಿದ್ದಾರೆ.
ಆಸ್ಪತ್ರೆಯವರೇ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಆಸ್ಪತ್ರೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆದರ್ಶ ನಗರ ಪೊಲೀಸರು ದೌಡಾಯಿಸಿದ್ದು, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.