ಬೆಂಗಳೂರು: ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಅದರ ಮಾಲೀಕನಿಗೆ ವಾಪಸ್ ಮಾಡುವ ಮೂಲಕ ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೋಹನ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಯಾಣಿಕರೊಬ್ಬರು ಮೋಹನ್ ಆಟೋ ಹತ್ತಿದ್ದರು. ಬಳಿಕ ಅವರು ಮೈಸೂರು ರಸ್ತೆ ಶಿರಸಿ ಸರ್ಕಲ್ ನಲ್ಲಿ ಆಟೋ ಇಳಿದು ಬ್ಯಾಗ್ ಬಿಟ್ಟು ಹೋಗಿದ್ದಾರೆ. ಈ ವೇಳೆ ಆಟೋದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕ ಮೋಹನ್, ಅದನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಬ್ಯಾಗ್ ಒಳಗಡೆ 2.57 ಲಕ್ಷ ನಗದು ಇರುವುದು ಬೆಳಕಿಗೆ ಬಂದಿದೆ.
ಕೂಡಲೇ ಮೋಹನ್ ಅವರು ಚಾಮರಾಜಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಪ್ರಯಾಣಿಕರಿಗೆ ಅವರ ಹಣದ ಬ್ಯಾಗ್ ಅನ್ನು ಮೋಹನ್ ಹಿಂದಿರುಗಿಸಿದ್ದಾರೆ. ಇತ್ತ ಹಣದ ಬ್ಯಾಗ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಹಿನ್ನೆಲೆಯಲ್ಲಿ ಆಟೋ ಚಾಲಕನಿಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅವರು ಪ್ರಶಂಸೆ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.