ಕೊಪ್ಪಳ: ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ತುಂಗಾಭದ್ರಾ ಜಲಾಶಯವು ತುಂಬಿದೆ. ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಬರದ ನಾಡು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ತುಂಗಾಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲೆಯ ಮುನಿರಾಬಾದ್ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯವು ಸಂಪೂರ್ಣ ತುಂಬಿದೆ. ಇದರಿಂದಾಗಿ ಜಲಾಶಯದಿಂದ ಗುರುವಾರ ತುಂಗಭದ್ರಾ ನದಿಗೆ 2 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.
Advertisement
Advertisement
ಶುಕ್ರವಾರವೂ ಸಹ 33 ಕ್ರಸ್ಟ್ ಗೇಟುಗಳ ಮೂಲಕ ನದಿಗೆ 2.22 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬೀಡಲಾಗಿದೆ. ಕಳೆದ 10 ವರ್ಷಗಳ ಬಳಿಕ ತುಂಗಾಭದ್ರ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕಂಪ್ಲಿ ತಾಲೂಕಿನಲ್ಲಿ ಬರುವ ಅನೇಕ ಸ್ಮಾರಕಗಳು ಮುಳುಗಡೆಗೊಂಡಿವೆ. ಅಲ್ಲದೆ ಕಂಪ್ಲಿ ಸೇತುವೆಯು ಸಹ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಕಂಪ್ಲಿ ಕೋಟೆ ಪ್ರದೇಶದ 25 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಈಗಾಗಲೇ ತಾಲೂಕು ಆಡಳಿತ ಮಂಡಳಿಯು 80ಕ್ಕೂ ಹೆಚ್ಚು ಮಂದಿ ನಿರಾಶ್ರಿತರಿಗೆ ಕಂಪ್ಲಿ ಸೇತುವೆಯ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ಆರಂಭಿಸಿದೆ.
Advertisement
ಅಲ್ಲದೇ ಕಂಪ್ಲಿ ಪಟ್ಟಣದಲ್ಲಿಯೂ ಗಂಜಿಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ. ಆದರೆ ನದಿ ನೀರು ಮನೆಗಳಿಗೆ ನುಗ್ಗಿದರೂ ಜನರು ಮನೆಯಿಂದ ಹೊರಬರುತ್ತಿಲ್ಲ. ಸ್ವತಃ ಕಂಪ್ಲಿ ತಹಶೀಲ್ದಾರ್ ರೇಣುಕಮ್ಮನವರು ನದಿ ನೀರಿಗಿಳಿದು ಜನರ ಮನವೊಲಿಸುತ್ತಿದ್ದಾರೆ. ಅಲ್ಲದೇ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿಮಾಡಿಕೊಳ್ಳುತ್ತಿದ್ದಾರೆ.
Advertisement
ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv